ದೊಡ್ಡಬಳ್ಳಾಪುರ, (ಜೂ.19): ತಾಲೂಕಿನ ದೊಡ್ಡತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಜಕ್ಕಲಮಡಗು ಜಲಾಶಯದಿಂದ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ಸೋಮವಾರ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಮುಖಂಡರಾದ ತಿ.ರಂಗರಾಜು, ಚಿಕ್ಕಣ್ಣಪ್ಪ, ಸತೀಶ್, ರಾಜ್ಯ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳು ನೀಡಿದ್ದ ಭರವಸೆಯಂತೆಯೇ ಟ್ಯಾಂಕರ್ ಮೂಲಕ ಗ್ರಾಮಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡಲಾಗಿದೆ. ಆದರೆ ಈಗ ಟ್ಯಾಂಕರ್ಗಳ ಬಾಡಿಗೆ ನೀಡದೇ ಇರುವುದರಿಂದ ನೀರು ಸರಬರಾಜು ಸ್ಥಗಿತವಾಗಿದೆ. ಬಾಡಿಗೆ ಹಣ ನೀಡುವ ವ್ಯವಸ್ಥೆಯಾಗಬೇಕು. ಮತ್ತೆ ನೀರು ಸರಬರಾಜು ಪ್ರಾರಂಭಿಸಬೇಕು. ನಮ್ಮ ಬೇಡಿಕೆ ಈಡೇರುವವರೆಗೂ ಆಮರಣಾಂತ ಉಪವಾಸ ಧರಣಿ ನಡೆಸಲಾಗುವುದು. ಈ ಬಗ್ಗೆ ಗ್ರಾಮಗಳಲ್ಲಿ ಈಗಾಗಲೇ ಸಭೆಗಳನ್ನು ನಡೆಸಿಯೇ ಇಂದಿನ ಧರಣಿಯನ್ನು ಪ್ರಾರಂಭಿಸಲಾಗಿದೆ ಎಂದರು.
ಧರಣಿ ನಿರತರೊಂದಿಗೆ ಮಾತನಾಡಿದ ತಹಶೀಲ್ದಾರ್ ಮೋಹನಕುಮಾರಿ, ದೊಡ್ಡತುಮಕೂರು, ಮಜರಾಹೊಸಹಳ್ಳಿ ಕೆರೆ ನೀರು ಕಲುಷಿತವಾಗುತ್ತಿರುವುದನ್ನು ತಡೆಯಲು ರೂ.130 ಕೋಟಿ ವೆಚ್ಚದ ಯೋಜನೆ ಸಿದ್ದಪಡಿಸಲಾಗಿದೆ. ಈ ಭಾಗದ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜನ್ನು ಮುಂದುವರೆಸುವ ಕುರಿತಂತೆ ಈಗಾಗಲೇ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್ಗಳೊಂದಿಗೆ ಸಭೆ ನಡೆಸಲಾಗಿದೆ. ಮಂಗಳವಾರದಿಂದ ಮತ್ತೆ ನೀರು ಸರಬರಾಜು ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದರು.
ತಹಶೀಲ್ದಾರ್ ಭರವಸೆ ಮೇರೆಗೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ. ಆದರೆ ಕೆರೆಗೆ ನಗರಸಭೆ ವ್ಯಾಪ್ತಿಯಯ ಒಳಚರಂಡಿಯಿಂದ ಹಾಗೂ ಬಾಶೆಟ್ಟಿಹಳ್ಳಿ ಪಟ್ಟಣಪಂಚಾಯತಿ, ಇಲ್ಲಿನ ಕೈಗಾರಿಕಾ ಪ್ರದೇಶಗಳಿಂದ ಬರುವ ತ್ಯಾಜ್ಯ ನೀರು ಕೆರೆಗಳಿಗೆ ಬರುವುದನ್ನು ನಿಲ್ಲಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಸಮಿತಿಯ ಮುಖಂಡರು ತಿಳಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….