ದೊಡ್ಡಬಳ್ಳಾಪುರ,(ಮಾ.08); ತಾಲೂಕಿನಾದ್ಯಂತ ಮಹಾಶಿವರಾತ್ರಿಯನ್ನು ಶ್ರದ್ದಾ ಭಕ್ತಿ, ಸಡಗರದಿಂದ ಆಚರಿಸಲಾಯಿತು. ಶಿವನ ದೇವಾಲಯಗಳಿಗೆ ನೂರಾರು ಭಕ್ತರು ತೆರಳಿ, ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬೆಳಗಿನಿಂದ ಅಭಿಷೇಕ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಹಲವಾರು ದೇವಾಲಯಗಳಲ್ಲಿ ರುದ್ರಾಭಿಷೇಕ, ಕ್ಷೀರಾಭಿಷೇಕ, ರುದ್ರಹೋಮಗಳು ನಡೆದವು. ಸಂಜೆ ಮನೆಗಳಲ್ಲಿ ಪೂಜೆ, ಫಲಹಾರ ಸೇವನೆ ಆಚರಣೆಗಳು ನಡೆದವು. ಶ್ರದ್ಧಾಳುಗಳು ಸಂಪ್ರದಾಯದಂತೆ ಉಪವಾಸ, ಪೂಜೆಗಳಲ್ಲಿ ನಿರತರಾಗಿದ್ದರು.
ನಗರದ ಶ್ರೀ ನಗರೇಶ್ವರ ದೇವಾಲಯದಲ್ಲಿ ಕೈಲಾಸದ ಅಲಂಕಾರದಲ್ಲಿ ಶಿವನ ಮೂರ್ತಿ ಹಾಗೂ ದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಚಿಕ್ಕಪೇಟೆಯ ಶ್ರೀ ಕಾಶೀ ವಿಶ್ವೇಶ್ವರ ದೇವಾಲಯದಲ್ಲಿ ಗಿರಿಜಾ ಕಲ್ಯಾಣೋತ್ಸವ ಹಾಗೂ ಪಾರಾಯಣ ನಡೆಯಿತು.
ನಗರದ ಬಸವಭವನದ ಬಳಿಯ ಸ್ವಯಂಭುಕೇಶ್ವರ (ಸೋಮೇಶ್ವರ) ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ತೇರಿನ ಬೀದಿಯಲ್ಲಿರುವ ಚಂದ್ರಮೌಳೇಶ್ವರ ದೇವಾಲಯ, ಶ್ರೀಕಂಠೇಶ್ವರ ದೇವಾಲಯ, ಶ್ರೀನಗರದ ಮಲೈ ಮಹದೇಶ್ವರ ದೇವಾಲಯ, ಶ್ರೀ ರಾಮಲಿಂಗ ಚೌಡೇಶ್ವರಿ, ರುಮಾಲೆ ವೃತ್ತದ ಶ್ರೀ ಗಣಪತಿ ದೇವಾಲಯ, ಕುಚ್ಚಪ್ಪನಪೇಟೆಯ ಕಾಳಿಕ ಕಮಟೇಶ್ವರ, ಮುಖ್ಯರಸ್ತೆಯ ಬಸವಣ್ಣ ದೇವಾಲಯ, ಚಿಕ್ಕಪೇಟೆಯ ವೀರಭದ್ರ ಹಾಗೂ ಬಸವಣ್ಣ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಅಲಂಕಾರ ಪೂಜ ಕಾರ್ಯಕ್ರಮಗಳು ನೆರವೇರಿದವು. ತಾಲೂಕು ಕಲಾವಿದರ ಸಂಘದಿಂದ ಭಜನೆ ಹಾಗೂ ಭಕ್ತಿಗೀತೆಗಳ ಗಾಯನ ನಡೆಯಿತು. ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಮಾಕಳಿ ಬೆಟ್ಟದಲ್ಲಿ ಪ್ರತಿ ವರ್ಷದಂತೆ ಮಾಕಳಿ ಮಲ್ಲೇಶ್ವರ ಸ್ವಾಮಿಯ ದೇವಾಲಯ, ದೊಡ್ಡಬೆಳವಂಗಲ ಸಮೀಪದ ರಾಂಪುರದ ತೋಪಯ್ಯನ ದೇವಾಲಯ, ಹುಲುಕುಡಿ ಬೆಟ್ಟದಲ್ಲಿನ ವೀರಭದ್ರಸ್ವಾಮಿ, ರಾಜಘಟ್ಟ ಈಶ್ವರ ದೇವಾಲಯ, ಆರೂಢಿ ಶ್ರೀ ಕೋಡಿಮಲ್ಲೇಶ್ವರ ಸ್ವಾಮಿ ದೇವಾಲಯ, ಅರಳು ಮಲ್ಲಿಗೆಯಲ್ಲಿನ ಬಯಲು ಬಸವಣ್ಣ, ಸೇರಿದಂತೆ ವಿವಿಧೆಡೆಗಳಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಬೆಳಗಿನಿಂದಲೇ ನೂರಾರು ಜನ ಭಕ್ತಾದಿಗಳು ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತಿದ್ದ ದೃಶ್ಯ ಕಂಡುಬಂತು.
ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಂಪುರ ಸಮೀಪದ ತೋಪನಯ್ಯಸ್ವಾಮಿ (ಶಿವ) ದೇವಸ್ಥಾನದ ಬಳಿ ಬಿಲ್ವಪತ್ರೆಯ ವನವಿದ್ದು, ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ನಡೆದವು.
ತಾಲೂಕಿನ ಮಧುರೆ ಹೋಬಳಿ ಕನ್ನಮಂಗಲ ಗೇಟ್ ಅಮ್ಮನ ಗುಡ್ಡ ಆದಿಶಕ್ತಿ ಅಮ್ಮನವರ ಮಹಾಕ್ಷೇತ್ರದಲ್ಲಿ ನೂತನವಾಗಿ ಪ್ರತಿಷ್ಟಾಪಿಸಿರುವ ಏಕಪೀಠ ಶಕ್ತಿ ಪಂಚಲಿಂಗನಾಥೇಶ್ವರ ಸ್ವಾಮಿಗೆ ಕಬ್ಬಿನ ಹಾಲಿನ ಅಭಿಷೇಕ ಮಾಡಲಾಯಿತು. ಪೀಠಾಧ್ಯಕ್ಷ ನರಸಿಂಹಮೂರ್ತಿ ಸ್ವಾಮೀಜಿ ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….