ದೊಡ್ಡಬಳ್ಳಾಪುರ, (ಜುಲೈ.16); ತಾಲ್ಲೂಕಿನಲ್ಲಿ ರಾಗಿ, ಮುಸುಕಿನಜೋಳ ಬಿತ್ತನೆ ಪ್ರಾರಂಭವಾಗಿರುವ ಸಮಯದಲ್ಲೇ ಡಿಎಪಿ ರಸಗೊಬ್ಬರ ದಾಸ್ತಾನು ಖಾಲಿಯಾಗಿ ಮೂರು ದಿನಗಳು ಕಳೆದಿದೆ. ಬಿತ್ತನೆ ಚಟುವಟಿಕೆ ನಡೆಯುವ ಈ ಸಮಯದಲ್ಲಿ ರೈತರೊಂದಿಗೆ ಸಭೆ ನಡೆಸುತ್ತಿರುವ ಕೃಷಿ ಇಲಾಖೆ ಅಧಿಕಾರಿಗಳನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿ ದೊಡ್ಡಬೆಳವಂಗಲ ಹೋಬಳಿ ಅಧ್ಯಕ್ಷ ಹನುಮಂತರಾಯಪ್ಪ ತೀವ್ರ ತರಾಟೆಗೆ ತೆಗೆದುಕೊಂಡರು.
ನಗರದ ಕೃಷಿ ಇಲಾಖೆಯ ಸಭಾಂಗಣದಲ್ಲಿ ಮಂಗಳವಾರ ರಸಗೊಬ್ಬರ, ಬೆಳೆ ವಿಮೆ, ಬಿತ್ತನೆ ಬೀಜ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ರೈತರೊಂದಿಗೆ ನಡೆದ ಸಂವಾದ ಸಭೆಯಲ್ಲಿ ಮಾತನಾಡಿದರು.
ಕೃಷಿ ಇಲಾಖೆ ಅಧಿಕಾರಿಗಳಿಗೆ ಇಡೀ ವರ್ಷದಲ್ಲಿ ಕೆಲಸ ಇರುವುದೇ ಮೇ ಇಂದ ಆಗಸ್ಟ್ ತಿಂಗಳವರೆಗೆ ಮಾತ್ರ. ಉಳಿದಂತೆ ಅಷ್ಟಾಗಿ ಕೆಲಸವೇ ಇರುವುದಿಲ್ಲ. ಲೋಕಸಭಾ ಚುನಾವಣ ನೀತಿ ಸಂಹಿತೆ ಮುಕ್ತಾಯವಾಗುತ್ತಿದ್ದಂತೆ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರ ಸಭೆಗಳನ್ನು ನಡೆಸಿ ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಬಿತ್ತನೆ ಬೀಜ, ಬೆಳೆ ವಿಮೆ ಸೇರಿದಂತೆ ಇತರೆ ತಾಂತ್ರಿಕ ಮಾಹಿತಿಗಳನ್ನು ನೀಡಬೇಕಿತ್ತು. ಬಿತ್ತನೆ ಸಮಯದಲ್ಲಿ ಸಭೆ ನಡೆಸಿ ತಿಳುವಳಿಕೆ ನೀಡುವ ಕ್ರಮವೇ ಅವೈಜ್ಞಾನಿಕವಾಗಿದೆ. ಸರ್ಕಾರಿ ದಾಖಲೆಗಾಗಿ ರೈತರ ಸಭೆ ನಡೆಸುವ ಬೇಜವಾಬ್ದಾರಿ ನಡವಳಿಕೆ ಮರುಕಳುಹಿಸದಂತೆ ಸೂಕ್ತ ಎಚ್ಚರವಹಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಮುಖಂಡರಾದ ಆರ್.ಸತೀಶ್,ಮುತ್ತೇಗೌಡ ಮಾತನಾಡಿ,ರಾಜ್ಯ ಬೀಜ ನಿಮಗದಿಂದ ರೈತರಿಗೆ ರಿಯಾಯಿತಿ ದರದಲ್ಲಿ ರಾಗಿ,ಮುಸುಕಿನಜೋಳದ ಬಿತ್ತನೆಯನ್ನು ವಿತರಿಸುವಾಗ ಪ್ರತಿ ವರ್ಷವು ಒಂದೇ ಪ್ರದೇಶದಲ್ಲಿ ಬೆಳೆಯುವ ಬೀಜಗಳನ್ನು ಖರೀದಿಸಿ ವಿತರಣೆ ಮಾಡುವ ಕ್ರಮ ಅವೈಜ್ಞಾನಿಕ. ರಾಜ್ಯದ ಬೇರೆ ಪ್ರದೇಶದ ರೈತರಿಗು ಸೂಕ್ತ ಮಾರ್ಗದರ್ಶನ ನೀಡಿ ಬಿತ್ತನೆ ಬೀಜ ಬೆಳೆಸಿ ಖರೀದಿ ಮಾಡಬೇಕು. ಇದರಿಂದ ರೋಗ ಮುಕ್ತ ಬೆಳೆ, ಉತ್ತಮ ಉಳಿವರಿ ಪಡೆಯಲು ಸಾಧ್ಯವಾಗಲಿದೆ ಎಂದರು.
ರಾಜ್ಯದ ಇತರೆ ತಾಲ್ಲೂಕುಗಳಂತೆ ಇಲ್ಲಿಯೂ ಬರ ಘೋಷಣೆಯಾಗಿತ್ತು. ಆದರೆ ತಾಲ್ಲೂಕಿನ ಎಷ್ಟು ಜನ ರೈತರಿಗೆ ಬೆಳೆ ವಿಮೆಯಿಂದ ಉಪಯೋಗವಾಗಿದೆ, ಯಾವ ಬೆಳೆಗೆ ವಿಮಾ ಹಣ ದೊರೆತಿದೆ ಎನ್ನುವ ಮಾಹಿತಿಯನ್ನು ನೀಡಬೇಕು. ಬೆಳೆ ವಿಮೆ ಹಣ ನೋಂದಣಿಗೆ ವಹಿಸುವಷ್ಟು ಕಾಳಜಿಯನ್ನು ಅಧಿಕಾರಿಗಳು ರೈತರಿಗೆ ಬೆಳೆ ವಿಮಾ ಪರಿಹಾರ ದೊರೆಯುಂತೆ ಮಾಡುವ ಕಡೆಗು ವಹಿಬೇಕು. ಬೆಳೆ ವಿಮೆಗೆ ಗ್ರಾಮವನ್ನು ಒಂದು ಘಟಕವಾಗಿ ಪರಿಗಣಿಸಿ ಪರಿಹಾರ ನೀಡಬೇಕು. ತಾಲ್ಲೂಕು ಅಥವಾ ಹೋಬಳಿಯನ್ನು ಘಟಕವಾಗಿ ಪರಿಗಣಿಸುವ ಕ್ರಮ ಅವೈಜ್ಞಾನಿಕ ವಿಧಾನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರಿತ್ಯದಿಂದ ಇಡೀ ಹೋಬಳಿಯಲ್ಲಿ ಸಮಪರ್ಕವಾಗಿ ಮಳೆಯಾಗುತ್ತಿರುವುದೇ ಅಪರೂಪವಾಗುತ್ತಿದೆ ಎಂದರು.
ಸಭೆಯಲ್ಲಿ ಹಾಜರಿದ್ದ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ,ತಾಲ್ಲೂಕು ಅಧ್ಯಕ್ಷ ಹನುಮೇಗೌಡ ಮಾತನಾಡಿ, ರಸಗೊಬ್ಬರ ಮಾರಾಟ ಮಳಿಗೆಗಳ ಮುಂದೆ ಸರ್ಕಾರಿ ಬೆಲೆ ಹಾಗೂ ರಸಗೊಬ್ಬರ ದಾಸ್ತಾನು ವಿವರಗಳನ್ನು ಕಡ್ಡಾಯವಾಗಿ ಸೂಚನ ಫಲಕದಲ್ಲಿ ಬರೆಯಬೇಕು. ಈಗ ಬಿತ್ತನೆಯಾಗಿರುವ ರಾಗಿ, ಮುಸುಕಿನಜೋಳದ ಪ್ರದೇಶಕ್ಕೆ ಅನುಗುಣವಾಗಿ ಯೂರಿಯು ಗೊಬ್ಬರು ರೈತರಿಗೆ ಸಕಾಲದಲ್ಲಿ ದೊರೆಯುವಂತೆ ಸರ್ಕಾರಕ್ಕೆ ಈಗಿನಿಂದಲೇ ಬೇಡಿಕೆಯ ಪಟ್ಟಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಮಟ್ಟದ ಕೃಷಿ ಉಪನಿರ್ದೇಶಕಿ ಗಾಯಿತ್ರಿ ಮಾತನಾಡಿ, ಡಿಎಪಿ ರಸಗೊಬ್ಬರ ರೈತರಿಗೆ ತಲುಪಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ರಾಗಿ ಸೇರಿದಂತರೆ ರೈತರಿಗೆ ಅಗತ್ಯ ಇರುವ ಬಿತ್ತನೆ ಬೀಜ ದಾಸ್ತಾನು ಸಹ ರೈತ ಸಂಪರ್ಕ ಕೇಂದ್ರಗಳಲ್ಲಿ ಇದೆ. ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ದೊಡ್ಡಬಳ್ಳಾಪುರ ರಸಗೊಬ್ಬರ ಮಾರಾಟ ಮಾಲೀಕರ ಸಂಘದ ಅಧ್ಯಕ್ಷ ಸುಬ್ಬೇಗೌಡ, ರೈತ ಸಂಘದ ಮುಖಂಡರಾದ ಸತೀಶ್, ವಾಸು,ತಿಮ್ಮಣ್ಣ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….