ದೊಡ್ಡಬಳ್ಳಾಪುರ, (ಸೆ.20): ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯನ್ನು ಪ್ರಾರಂಭಿಸಲಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸಮಿತಿಯ ಸದಸ್ಯರು ಅಧಿಕಾರಿಗಳು ಶ್ರಮಿಸಬೇಕು ಎಂದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ದೊಡ್ಡಬಳ್ಳಾಪುರ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉದ್ದೇಶಗಳ ಕುರಿತು ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಸೌಲಭ್ಯಗಳನ್ನು ಸಾಕಷ್ಟು ಜನರು ಪಡೆದಿದ್ದಾರೆ. ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳ್ಳಬೇಕಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಸಮಿತಿಯ ಕಚೇರಿ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ ಯೋಜನೆಗಳು ಮುಟ್ಟಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ.
ಇದೇ ಮಾದರಿಯಲ್ಲಿ ಕಳೆದ 20 ವರ್ಷಗಳಿಂದ ಸರ್ಕಾರ ಇಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ವಸತಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಪಡಿತರ, ವಿದ್ಯಾರ್ಥಿ ವೇತನ, ನಿವೇಶನ, ಉಚಿತ ವಿದ್ಯುತ್ ಸೇರಿದಂತೆ ಈಗಾಗಲೇ ಸಾಕಷ್ಟು ಜನಪರ ಯೋಜನೆಗಳನ್ನು ರಾಜ್ಯದ ಜನತೆಗೆ ಸರ್ಕಾರ ಮೊದಲಿನಿಂದಲೂ ಕೊಡುಗೆಯಾಗಿ ನೀಡಿದೆ ಎಂದರು.
ಇದನ್ನೂ ಓದಿ: ಕೋಮುಗಲಭೆಗೆ ಪ್ರಚೋದನೆ: ಆರ್.ಅಶೋಕ, ಶೋಭಾ ವಿರುದ್ಧ ಎಫ್‌ಐಆರ್ ದಾಖಲು..!
ಇದರ ಮುಂದಿನ ಆಯಾಮವಾಗಿ ರಾಜ್ಯದ ಎಲ್ಲ ಜನರಿಗೆ ಹೆಚ್ಚಿನ ಯೋಜನೆಗಳನ್ನು ತಲುಪಿಸಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು, ಸಮಿತಿ ಸದಸ್ಯರು ಶ್ರಮಿಸಬೇಕು ಎಂದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ವಿಶ್ವನಾಥ ರೆಡ್ಡಿ ತಿಳಿಸಿದರು.

ಕಾರ್ಯನಿರ್ವಾಹಕ ಅಧಿಕಾರಿ ಎನ್ ಮುನಿರಾಜು ಮಾತನಾಡಿ ವಿವಿಧ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಯ ಸೌಲಭ್ಯಗಳನ್ನು ತಲುಪಿಸುವಲ್ಲಿ ವಿಸ್ತೃತ ಪ್ರಚಾರ ಕೈಗೊಂಡು ಪ್ರಗತಿ ಸಾಧಿಸಲು ವಿಶೇಷ ಗಮನ ನೀಡಬೇಕೆಂದು ತಿಳಿಸಿದರು.
ಶಕ್ತಿ ಯೋಜನೆಯಡಿ ತಾಲ್ಲೂಕು ವ್ಯಾಪ್ತಿಯಲ್ಲಿ 73 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು,ಸರ್ಕಾರ 21.56 ಕೋಟಿ ರೂ.ಗಳನ್ನು ಭರಿಸಿದೆ.
ಗೃಹ ಜ್ಯೋತಿ ಯೋಜನೆಯಡಿ 844439 ಗೃಹಗಳಿಗೆ ಸಂಪರ್ಕಕ್ಕೆ ಪ್ರತಿ ಮಾಹೆ 3.24 ಕೋಟಿ ಹಣ ಸರ್ಕಾರ ಭರಿಸುತ್ತಿದೆ.
ಗೃಹಲಕ್ಷ್ಮಿ ಯೋಜನೆಯಡಿ ತಾಲ್ಲೂಕಿನಲ್ಲಿ 64249 ಫಲಾನುಭವಿಗಳಿದ್ದು ಜಿಲ್ಲೆಗೆ ಇದುವರೆವಿಗೂ 417 ಕೋಟಿ ರೂ ಹಣವನ್ನು ಗೃಹಲಕ್ಷ್ಮಿಯರಿಗೆ ಬಿಡುಗಡೆ ಮಾಡಿದ್ದು,ಮಹಿಳೆಯರ ಆರ್ಥಿಕ ಶಕ್ತಿ ವೃದ್ದಿಸಿದೆ.
ಅನ್ನ ಭಾಗ್ಯ ಯೋಜನೆಯಡಿ 62836 ಪಡಿತರ ಚೀಟಿಗಳಿಗೆ ಆಹಾರದ ಜೊತೆಗೆ ಹಣ ನೀಡಲಾಗುತ್ತಿದೆ. ಬಾಕಿ ಇರುವ ಹೊಸ ಪಡಿತರ ಚೀಟಿಗಳನ್ನು ತ್ವರಿತವಾಗಿ ವಿತರಿಸಬೇಕು.ಯುವ ನಿಧಿಯಡಿ ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿದ ನಿರುದ್ಯೋಗಿ ಯುವಕ ಯುವತಿಯರು ಪೋರ್ಟಲ್ ನಲ್ಲಿ ನೋಂದಾಯಿಸಲು ವ್ಯಾಪಕ ಪ್ರಚಾರ ಮಾಡಬೇಕೆಂದು ತಿಳಿಸಿದರು.
ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಸುದರ್ಶನ್, ನಾಗರಾಜು, ನಂಜಪ್ಪ, ಶ್ರೀನಿವಾಸ್, ನಟರಾಜ್, ಮಂಜುಳಮ್ಮ, ಮಹೇಶ್ವರಿ, ಶಂಕರ್, ನಾಗೇಶ್, ವೆಂಕಟೇಶ್, ರಹೀಮ್ ಜಾನ್, ಆಹಾರ ಇಲಾಖೆ ಶಿರಸ್ತೇದಾರ್ ಶ್ರೀಧರ್, ಬೆಸ್ಕಾಂ ಇಲಾಖೆ ಗ್ರಾಮಾಂತರ ಗಂಗಾಧರ್, ಬೆಸ್ಕಾಂ ಇಲಾಖೆ ನಗರ ನಟೇಶ್, ಯುವನಿಧಿ ಮಂಜು ರೆಡ್ಡಿ, ಸಿಡಿಪಿಒ ರವಿಕುಮಾರ್, Ksrtc ವ್ಯವಸ್ಥಾಪಕ ಭಾಗವಹಿಸಿದ್ದರು.