Daily story: ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಮಂತ್ರಿಯಾಗಿದ್ದ ಸಮಯ. ಒಂದು ದಿನ ಶಾಸ್ತ್ರಿಯವರ ಮಗ ತಂದೆಯ ಬಳಿಗೆ ಬಂದು ‘ಅಪ್ಪ ನನಗೆ ಒಂದು ಬೈಕ್ ಕೊಡಿಸಿ’ ಅಂತ ಕೇಳಿದನು.
ಆಗ ಶಾಸ್ತ್ರಿ ಯವರು ಹೇಳಿದ್ದು ಏನು ಗೊತ್ತಾ? ಮಗನೇ ಜನರು ಕೊಡುವ ಹಣದಿಂದ ನಾವು ಹೊಟ್ಟೆ ತುಂಬಿಸಿಕೊಳ್ತಾ ಇದೀವಿ. ಹೀಗಿರುವಾಗ ನಿನಗೆ ಬೈಕ್ ಕೊಡಿಸುವಷ್ಟು ಹಣ ನನ್ನ ಹತ್ತಿರ ಇಲ್ಲ’ ಎಂದರು.
ಆಗ ಬೇಜಾರು ಮಾಡಿಕೊಂಡ ಮಗ ತನ್ನ ತಾಯಿಗೆ ಆ ವಿಷಯವನ್ನು ತಿಳಿಸಿದನು. ಆಗ ತಾಯಿ ತನ್ನಲ್ಲಿರುವ ಹಣದಿಂದ ಒಂದು ಬೈಕ್ ಕೊಡಿಸಿದರು. ಈ ವಿಚಾರವನ್ನು ಕಂಡು ಶಾಸ್ತ್ರಿಯವರಿಗೆ ಅಚ್ಚರಿಯಾಗಿ ತಮ್ಮ ಪತ್ನಿಗೆ ಕೇಳಿದರು.
‘ನನ್ನ ಹತ್ತಿರ ಹಣವೇ ಇರಲಿಲ್ಲ. ಆದರೆ ಒಂದು ಬೈಕ್ ಕೊಡಿಸುವಷ್ಟು ಹಣ ನಿನ್ನಲ್ಲಿ ಹೇಗೆ ಬಂತು?’ ಎಂದು ಕೇಳಿದರು. ಆಗ ಶಾಸ್ತ್ರಿಯವರ ಪತ್ನಿ ‘ನೀವು ಮನೆಯ ಖರ್ಚಿಗಾಗಿ ಕೊಡುತ್ತಿದ್ದ ಹಣದಲ್ಲಿ ಸ್ವಲ್ಪ ಸ್ವಲ್ಪ ಉಳಿಸುತ್ತಿದ್ದೆ. ಆ ಹಣದಿಂದಲೇ ಮಗನಿಗೆ ಬೈಕ್ ಕೊಡಿಸಿದೆ’ ಎಂದು ಹೇಳಿದರು.
ಮರುದಿನವೇ ಶಾಸ್ತ್ರಿಯವರು ಸರ್ಕಾರಕ್ಕೆ ಒಂದು ಪತ್ರವನ್ನು ಬರೆದರು. ‘ಸರ್ಕಾರ ನನಗೆ ನೀಡುತ್ತಿರುವ ಸಂಬಳ ನನ್ನ ಕುಟುಂಬದ ಖರ್ಚಿಗೆ ವಿನಿಯೋಗವಾಗಿ ಇನ್ನೂ ಹೆಚ್ಚಿಗೆ ಉಳಿಯುತ್ತಿದೆ. ದಯವಿಟ್ಟು ಆ ಹೆಚ್ಚಿನ ಹಣವನ್ನು ನನ್ನ ಸಂಬಳದಿಂದ ಕಡಿಮೆ ಮಾಡಿ’ ಎಂದು ಪತ್ರದಲ್ಲಿ ತಿಳಿಸಿದರು.
ಕೃಪೆ: ಶ್ರೀಶೈಲ ಎಸ್.ಅಂಗಡಿ, ಬೆಳಗಾವಿ (ಸಾಮಾಜಿಕ ಜಾಲತಾಣ)