ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಕಲಾಪದ ವೇಳೆ ಬಿಜೆಪಿ ಸದಸ್ಯ ಸಿಟಿ ರವಿ (CT Ravi) ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಸಚಿವೆ ಕಣ್ಣೀರು ಹಾಕಿರುವುದಾಗಿ ವರದಿಯಾಗಿದೆ.
ಈ ಕುರಿತು ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಗೆ ತೆರಳಿ ಹೆಬ್ಬಾಳ್ಳರ್ ಅವರು ದೂರು ನೀಡಿದ್ದು, ಸಭಾಪತಿ ಎದುರು ಅವರು ಕಣ್ಣೀರು ಸುರಿಸಿದ್ದಾರೆ. ರವಿ ಅವರ ಹೇಳಿಕೆಯಿಂದ ನೊಂದು ಲಕ್ಷ್ಮೀ ಹೆಬ್ಬಾಳ್ಳರ್ ಅವರು ಕಣ್ಣಿರು ಹಾಕುತ್ತಲೇ ಪರಿಷತ್ತಿನಿಂದ ಹೊರಗೆ ಹೋಗಿದ್ದಾರೆನ್ನಲಾಗಿದೆ.
ಇನ್ನು ಘಟನೆ ಬೆನ್ನಲ್ಲೇ ಸುವರ್ಣಸೌಧದ ಸಿಎಂ ಸಿದ್ದರಾಮಯ್ಯ ಅವರ ಕಚೇರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಬೈರತಿ ಸುರೇಶ್, ಡಾ.ಸುಧಾಕರ್ ಇನ್ನಿತರ ಆಗಮಿಸಿ ಸಿಟಿ ರವಿ ಹೇಳಿಕೆ ಕುರಿತು ಸಿಎಂಗೆ ಮಾಹಿತಿ ನೀಡಿದ್ದಾರೆ.
ಅಲ್ಲದೇ ರವಿ ಅವರ ಅಮಾನತಿಗೆ ಆಗ್ರಹಿಸಿದ್ದಾರೆ. ಹತ್ತು ಬಾರಿ ಸಿಟಿ ರವಿ ಅವರು ಅಶ್ಲೀಲ ಬದ ಬಳಕೆ ಮಾಡಿದ್ದಾರೆಂದು ಆರೋಪಿಸಲಾಗುತ್ತಿದ್ದು, ಆಡಿಯೋ-ವಿಡಿಯೋ ಪರಿಶೀಲನೆಗೆ ಸಭಾಪತಿಗಳು ಸೂಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಸಿ. ಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಸಭ್ಯ ಪದ ಬಳಕೆ ಮಾಡಿದ್ದು , ಅದು ಕ್ರಿಮಿನಲ್ ಅಪರಾಧವಾಗಿದೆ. ಈ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಧಾನಪರಿಷತ್ ಸಭಾಪತಿ ಯವರಿಗೆ ದೂರು ನೀಡಿರುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ಅವರು ಇಂದು ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಿಟಿ ರವಿ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಿಟಿ ರವಿ ಪ್ರತಿಕ್ರಿಯೆ: ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಟಿ ರವಿ, ನಾನು ಆ ರೀತಿ ಯಾವುದೇ ಪದ ಬಳಸಿಲ್ಲ. ದಾಖಲೆ ಪರಿಶೀಲನೆ ನಡೆಸಲಿ ಎಂದಿದ್ದಾರೆ.