ಹುಬ್ಬಳ್ಳಿ: ಬೆಳಗಾವಿ ಚಳಿಗಾಲದ ಅಧಿವೇಶನದ ವಿಧಾನ ಪರಿಷತ್ ಕಲಾಪದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳರ್ ಕುರಿತು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಬಳಸಿದ ಅಶ್ಲೀಲ ಪದ ಬಳಕೆ ವಿಚಾರವನ್ನು ಸಿಐಡಿ (CID) ತನಿಖೆಗೆ ಆದೇಶಿಸಿರುವುದಾಗಿ ಗೃಹಸಚಿವ ಜಿ.ಪರಮೇಶ್ವರ್ ಹೇಳಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.
ಸಿಟಿ ರವಿ ಆ ರೀತಿ ಹೇಳಿಲ್ಲ ಅಂತಾರೆ, ಹೆಬ್ಬಾಳ್ಳರ್ ಪಕ್ಕದಲ್ಲಿದ್ದವರು ಆ ಮಾತು ಆಡಿದ್ದಾರೆ ಅಂತ ಹೇಳ್ತಾರೆ. ಈ ಎಲ್ಲ ವಿಚಾರಗಳ ಬಗ್ಗೆ ತನಿಖೆ ಆಗಲೆಂದೇ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಈ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಲ್ಲ ತನಿಖೆ ನಡೆಯುವಾಗ ನಾವು ಹೇಳಿಕೆಗಳನ್ನ ನೀಡುವುದು ಸರಿಯಲ್ಲ.
ಸ್ಪೀಕರ್ ಅವರು ತಮ್ಮ ಕೆಲಸ ತಾವು ಮಾಡುತ್ತಾರೆ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲಿಯ ಸಾಧಕ ಬಾಧಕಗಳನ್ನ ನೋಡಿಕೊಂಡು ಹೇಳಿಕೆ ಕೊಟ್ಟಿರಬಹುದು, ಕಾನೂನು ಪ್ರಕ್ರಿಯೆ ನಡೆಯುವಾಗ ಕೆಲವು ವಿಳಂಬವಾಗಬಹುದು, ಆದರೆ ಸತ್ಯ ಏನೆಂದು ತಿಳಿದು ಬರುತ್ತದೆ ಎಂದು ಜಿ ಪರಮೇಶ್ವರ್ ಹೇಳಿದರು.
ಪೊಲೀಸ್ ಇಲಾಖೆ ಜವಾಬ್ದಾರಿಯುತ ಇಲಾಖೆ. ಸಿಎಂ ಅಥವಾ ಗೃಹ ಸಚಿವರ ಆದೇಶವನ್ನು ಮಾತ್ರ ಪೊಲೀಸರು ಪಾಲನೆ ಮಾಡುತ್ತಾರೆ. ಬೇರೆ ಯಾರೇ ಆದೇಶ ಮಾಡಿದ್ರೂ ಅದನ್ನು ಪಾಲನೆ ಮಾಡಲ್ಲ. ಅವರಿವರು ಆರೋಪ ಮಾಡುತ್ತಾರೆ ಅಂತಾ ನಾವು ಇಲಾಖೆ ನಡೆಸೋಲ್ಲ. ಕಾನೂನು ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ.
ಜಿ.ಪರಮೇಶ್ವರ್ ಅಸಮರ್ಥ ಗೃಹ ಸಚಿವ ಎಂಬ ಜೋಶಿಯವರ ಲೇವಡಿ ವಿಚಾರವಾಗಿ ತಿರುಗೇಟು ನೀಡಿ, ಪ್ರಲ್ಹಾದ್ ಜೋಶಿಯವರು ಅಸಮರ್ಥ ಕೇಂದ್ರ ಸಚಿವ ಎಂದರೆ ಒಪ್ಪಿಕೊಳ್ಳುತ್ತಾರಾ? ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ. ಹಾಗಾಗಿ ಅವರು ಹಾಗೆ ಹೇಳಿದ್ದಾರೆಂದರು.
ಕಳೆದ ಗುರುವಾರ ವಿಧಾನಪರಿಷತ್ ನಲ್ಲಿ ಚರ್ಚೆ ನಡೆಯುತ್ತಿರುವ ವೇಳೆ ಸಿ.ಟಿ. ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ವರ್ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಈ ವೇಳೆ ಲಕ್ಷ್ಮೀ ಹೆಬ್ಬಾಳ್ಳರ್, ಸಿ.ಟಿ. ರವಿಯವರನ್ನು ಕೊಲೆಗಾರ ಎಂದು ನಿಂದಿಸಿದ್ದರೆ ಪ್ರತ್ಯುತ್ತರವಾಗಿ ಸಿ.ಟಿ. ರವಿ ಅಸಾಂವಿಧಾನಿಕ ಪದವೊಂದನ್ನು ಬಳಸಿ ನಿಂದಿಸಿದ್ದರು.
ಈ ಪ್ರಕರಣದ ಸಂಬಂಧ ಹಳೇಹುಬ್ಬಳ್ಳಿ ಠಾಣೆ ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಸಿಬ್ಬಂದಿ ಪತ್ರ ಬರೆಯಲಾಗಿದೆ. ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಬಳಿ ವರದಿ ತರಸಿಕೊಳ್ಳುತ್ತೇನೆ. ತಪ್ಪು ಮಾಡಿದ್ದೇರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಸಿಟಿ ರವಿಯವರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಸೋಮವಾರ ಸಿಟಿ ರವಿ ಸದನದಲ್ಲಿ ಮಾಡಿ ಪದ ಪ್ರಯೋಗದ ವಿಡಿಯೋವನ್ನು ನಿನ್ನೆ ಬಿಡುಗಡೆ ಮಾಡಿದ್ದ ಲಕ್ಷ್ಮೀ ಹೆಬ್ಬಾಳ್ಳರ್ ಅವರು ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಕಾನೂನು ಸಮರದ ಮುನ್ಸೂಚನೆ ನೀಡಿದ್ದರು.