ಭೋಪಾಲ್: ಕಾಡು ಹಂದಿಯನ್ನು ಬೇಟೆಯಾಡಲು ಬಂದು ಬಾವಿಗೆ ಬಿದ್ದಿದ್ದ ಹುಲಿರಾಯನನ್ನು ಪೆಂಚ್ ಟೈಗರ್ ರಿಸರ್ವ್ ರಕ್ಷಣಾ ತಂಡದ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ರಕ್ಷಣೆ ಮಾಡಿರುವಂತಹ ಘಟನೆ ಮಧ್ರಪ್ರದೇಶದ ಪಿಪಾರಿಯಾ ಗ್ರಾಮದಲ್ಲಿ ನಡೆದಿದೆ.
ಮಧ್ಯಪ್ರದೇಶದ ಪೆಂಚ್ ರಾಷ್ಟ್ರೀಯ ಉದ್ಯಾನವನದ ಸಮೀಪದ ಪಿಪಾರಿಯಾ ಗ್ರಾಮದಲ್ಲಿ ಹುಲಿಯೊಂದು ಕಾಡು ಹಂದಿಯನ್ನು ಬೇಟೆಯಾಡಲು ಯತ್ನಿಸಿದ್ದ ವೇಳೆ, ಎರಡು ವನ್ಯಜೀವಿಗಳು ಬಾವಿಗೆ ಬಿದ್ದಿವೆ.
ಘಟನೆಯ ಬಗ್ಗೆ ಗ್ರಾಮಸ್ಥರು ಪೆಂಚ್ ಟೈಗರ್ ರಿಸರ್ವ್ ರಕ್ಷಣಾ ತಂಡದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನಂತರ ಹುಲಿಯನ್ನು ರಕ್ಷಿಸಲು ಕಾರ್ಯಾಚರಣೆಯನ್ನು ಮಾಡಲಾಗಿದೆ.
ಹುಲಿಯನ್ನು ರಕ್ಷಿಸಲು ಗ್ರಾಮಸ್ಥರು ಹಗ್ಗ ಹಾಗೂ ಮಂಚವನ್ನು ತಂದು, ಅದನ್ನು ಬಾವಿಗಿಳಿಸಿ ಹುಲಿಯನ್ನು ನೀರಿನಿಂದ ಮೇಲೆತ್ತಲು ಸಹಾಯ ಮಾಡಿದ್ದಾರೆ.
ಅಧಿಕಾರಿಗಳು ಬೋನನ್ನು ಕೂಡಾ ತಂದು ಅದನ್ನು ಬಾವಿಗಿಳಿಸಿದ್ದಾರೆ. ಹಲವು ನಿಮಿಷಗಳ ಬಳಿಕ ನೀರಿನಿಂದ ರಕ್ಷಿಸಿಕೊಳ್ಳಲು ಹುಲಿ ನಿಧಾನವಾಗಿ ಬೋನಿನೊಳಗೆ ಪ್ರವೇಶಿಸಿದೆ.
ಸುಮಾರು ಮೂರು ಗಂಟೆಗಳ ಸುದೀರ್ಘ ಪ್ರಯತ್ನದ ನಂತರ ಹುಲಿಯನ್ನು ರಕ್ಷಿಸಲಾಗಿದೆ.
ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.