ದೊಡ್ಡಬಳ್ಳಾಪುರ (Doddaballapura); ನಗರದ ಖಾಸ್ಬಾಗ್ ದರ್ಗಾಪುರದಲ್ಲಿನ ಶ್ರೀ ರಥಸಪ್ತಮಿ ಶನೇಶ್ವರ ಸ್ವಾಮಿ ದೇವಾಲಯ ಹಾಗೂ ತಿಮ್ಮಪ್ಪಸ್ವಾಮಿಯವರ ಮಠದ ರಜತಮಹೋತ್ಸವ ಸಮಾರಂಭ ಶ್ರದ್ಧಾಭಕ್ತಿಗಳಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಕಳಶಾರಾಧನೆ, ಕುಂಬಾಭಿಷೇಕ, ನವಗ್ರಹ, ಮೃತ್ಯುಂಜಯ ಹೋಮ, ಶನೇಶ್ವರ ಹೋಮ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅನ್ನಸಂತರ್ಪಣೆ ನಡೆಯಿತು.
ಮಂಗಳವಾರ ಮಧ್ಯಾಹ್ನ ಜೇಷ್ಠಾದೇವಿ ಸಮೇತ ಶನೇಶ್ವರ ಸ್ವಾಮಿ ಕಲ್ಯಾಣೋತ್ಸವ ಸಂಭ್ರಮದಿಂದ ನೆರವೇರಿತು.
ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಆತ್ಮಶುದ್ಧಿ, ನಿಶ್ಕಲ್ಮಶ ಮನಸ್ಸು, ಭಕ್ತಿ ಭಾವನೆಗಳ ಜಾಗೃತಿ ಮೂಡಿಸುವಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದಾಗಿದೆ.
ಧಾರ್ಮಿಕ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಧಾರ್ಮಿಕ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸಬೇಕಾಗಿದೆ. ಸತ್ಕಾರ್ಯ,ಸೇವಾ ಕಾರ್ಯಗಳೊಂದಿಗೆ ಜಗತ್ತಿಗೆ ಒಳಿತನ್ನು ಮಾಡುವ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕಿದೆ.
ಮನುಷ್ಯ ಕಷ್ಟಗಳಿಗೆ ಒಳಗಾದಾಗ ದೇವರ ಮೊರೆ ಹೋಗುವುದು ಸಹಜ. ಆದರೆ ಸುಖದಲ್ಲಿದ್ದಾಗಲೂ ದೇವರನ್ನು ಸ್ಮರಣೆ ಮಾಡುವುದು ಮುಖ್ಯವಾಗಿದೆ ಎಂದರು.
ಈ ವೇಳೆ ಶಾಸಕ ಧೀರಜ್ ಮುನಿರಾಜು, ಶ್ರೀ ರಥಸಪ್ತಮಿ ಶನೇಶ್ವರ ಸ್ವಾಮಿ ದೇವಾಲಯ ಸಮಿತಿಯ ಅಧ್ಯಕ್ಷ ಡಿ.ಎನ್.ದೊಡ್ಡನರಸಪ್ಪ, ಉಪಾಧ್ಯಕ್ಷ ಪೈಲ್ವಾನ್ ಶ್ರೀನಿವಾಸ್, ಪ್ರಧಾನ ಅರ್ಚಕ ಹಾಗೂ ಸಂಸ್ಥಾಪಕ ಎಂ.ಪುಟ್ಟಯ್ಯ, ಮುಖ್ಯ ಸಲಹೆಗಾರ ಎಂ.ಎಸ್.ಮಂಜುನಾಥ್, ವ್ಯವಸ್ಥಾಪಕ ಹಾಗೂ ಅರ್ಚಕ ಪು.ಮಹೇಶ್ ಹಾಜರಿದ್ದರು.
ಹನುಮಂತರಾಜು ಅವರಿಂದ ಹರಿಕಥೆ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ನಡೆದವು.