ಬೆಂಗಳೂರು; ವೃದ್ಧರನ್ನ ಗುರಿಯಾಗಿಸಿಕೊಂಡು ಎಟಿಎಂ (ATM) ಯಂತ್ರಗಳ ಬಳಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನ ಪುಲಿಕೇಶಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಭಾರತ ಮೂಲದ ನಯಾಜ್, ಸುಧಾಂಶು ಹಾಗೂ ರಜೀಬ್ ಬಂಧಿತ ಆರೋಪಿಗಳು.ಬಂಧಿತರನ್ನ ಹೆಚ್ಚಿನ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಪುಲಕೇಶಿ ನಗರ ಪೊಲೀಸರು ತಿಳಿಸಿದ್ದಾರೆ.
ಜನಸಂದಣಿ ಕಡಿಮೆಯಿರುವ ಅಥವಾ ನಿರ್ಜನ ಪ್ರದೇಶಗಳಲ್ಲಿರುವ ಎಟಿಎಂಗಳ ಬಳಿಯಿರುತ್ತಿದ್ದ ಆರೋಪಿಗಳು, ಹಣ ವಿತ್ ಡ್ರಾ ಮಾಡಲು ಬರುವ ವೃದ್ದರನ್ನ ಟಾರ್ಗೆಟ್ ಮಾಡುತ್ತಿದ್ದರು.
ಹಣ ವಿತ್ ಡ್ರಾ ಮಾಡಲು ನೆರವು ಕೇಳಿದಾಗ ಅವರಿಂದ ಡೆಬಿಟ್ ಕಾರ್ಡ್ ಹಾಗೂ ಪಿನ್ ಕೇಳಿ ಪಡೆದುಕೊಳ್ಳುತ್ತಿದ್ದರು. ಆದರೆ ತಾವು ಮೊದಲೇ ಸಿದ್ಧವಿಟ್ಟುಕೊಂಡ ನಕಲಿ ಡೆಬಿಟ್ ಕಾರ್ಡ್‌ನ್ನ ಎಟಿಎಂ ಯಂತ್ರದಲ್ಲಿ ಸ್ವೈಪ್ ಮಾಡಿ ಪಿನ್ ನಮೂದಿಸುತ್ತಿದ್ದರು.
ಹಣ ಬರದಿದ್ದಾಗ ತಾಂತ್ರಿಕ ಸಮಸ್ಯೆಯ ನೆಪ ಹೇಳಿ ಕಳಿಸುತ್ತಿದ್ದರು. ಬಳಿಕ ತಾವು ಎಗರಿಸಿಟ್ಟುಕೊಂಡಿದ್ದ ಅಸಲಿ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿ ಹಣ ವಿತ್ ಡ್ರಾ ಮಾಡಿಕೊಂಡು ಪರಾರಿಯಾಗುತ್ತಿದ್ದರು.
ಎಗರಿಸಿದ ಹಣದಲ್ಲಿ ಸುಧಾಂಶು ಮತ್ತು ರಜೀಬ್ ತಮ್ಮ ತಮ್ಮ ಪತ್ನಿಯೊಂದಿಗೆ ಪ್ರವಾಸ ಕೈಗೊಂಡು ವಿಲಾಸಿ ಜೀವನ ನಡೆಸಿದ್ದರು. ಸದ್ಯ ಮೂವರನ್ನೂ ಹೆಚ್ಚಿನ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.