ದೊಡ್ಡಬಳ್ಳಾಪುರ (Doddaballapura): ಬಸವೇಶ್ವರನಗರ ವಾರ್ಡಿನ ಅಶ್ವತ್ ಕಟ್ಟೆ ಬಳಿ ನಗರ ಪೊಲೀಸ್ ಠಾಣೆಯಿಂದ ಮಂಗಳವಾರ ಸಂಜೆ ಬೀಟ್ ಸಭೆಯನ್ನು ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಇನ್ಸ್ಪೆಕ್ಟರ್ ಅಮರೇಶ್ ಗೌಡ, ಜನರು ಸಮಸ್ಯೆಗಳನ್ನು ವ್ಯಕ್ತಪಡಿಸಲು ಹಾಗೂ ಅವುಗಳಿಗೆ ಪರಿಹಾರ ಒದಗಿಸಲು ಬೀಟ್ ಸಭೆ ಸಹಕಾರಿಯಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಸರಗಳ್ಳತನ, ಮನೆಗಳ್ಳತನ, ಸೈಬರ್ ಕ್ರೈಂ, ಸಂಚಾರಿ ನಿಯಮಗಳ ಕುರಿತು ಹೆಚ್ಚಿನ ಗಮನ ನೀಡಬೇಕಿದೆ. ಕಾನೂನು ಪಾಲನೆ ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದರು.
ಇದೇ ವೇಳೆ ಅಕ್ರಮ ಮಧ್ಯ ಮಾರಾಟ, ಕ್ರಿಕೆಟ್ ಬೆಟ್ಟಿಂಗ್, ಗಾಂಜಾ ಸೇವನೆ ಮತ್ತು ಮಾರಾಟ, ಮೀಟರ್ ಬಡ್ಡಿ ದಂದೆ, ವೇಶ್ಯಾವಾಟಿಕೆ ಮುಂತಾದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು.
ಈ ರೀತಿಯ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ನೇರವಾಗಿ ಮಾಹಿತಿ ನೀಡುವಂತೆ ಮನವಿ ಮಾಡಿದರು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಭರವಸೆ ನೀಡಿದರು.
ಬೀಟ್ ಸಭೆಯಲ್ಲಿ ಭಾಗಿಯಾಗಿದ್ದ ಸಾರ್ವಜನಿಕರು ನಾಗರಿಕರು ವೈಯಕ್ತಿಕ ಸಮಸ್ಯೆಗಳು, ನಗರಸಭೆಯಿಂದ ಆಗಬೇಕಾಗಿರುವ ಮೂಲ ಸೌಲಭ್ಯಗಳ ಕುರಿತು ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪದ್ಮನಾಭ, ವಾರ್ಡಿನ ಹಿರಿಯ ಮುಖಂಡರಾದ ಕೃಷ್ಣಪ್ಪ, ಮಂಜುಳಾ, ಜೈರಾಮ್, ಎಎಸ್ಐ ಕೃಷ್ಣಮೂರ್ತಿ, ಬೀಟ್ ಸಿಬ್ಬಂದಿಗಳಾದ ಶಿವಾನಂದ, ಸಿದ್ದಲಿಂಗ ಪೂಜಾರಿ ಇದ್ದರು.