ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯ NHM ನೌಕರರಿಗೆ ಕಳೆದ 2 ತಿಂಗಳಿಂದಲೂ ವೇತನ ನೀಡದೇ ಸತಾಯಿಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾವಿರಾರು ನೌಕರರು ಹಿಡಿ ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಾಗ್ದಾಳಿ ನಡೆಸಿದ್ದಾರೆ
ಈ ಕುರಿತಂತೆ ಟ್ವಿಟ್ ಮಾಡಿರುವ ಅವರು, 2025-26 ನೇ ಸಾಲಿನ ಸಿಬ್ಬಂದಿಗಳ ಒಪ್ಪಂದದ ಅವಧಿ ನವೀಕರಿಸದೇ ಜೂನ್ ವರೆಗೆ ವಿಸ್ತರಿಸುವ ಮೂಲಕ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವ ಆತಂಕದ ಪರಿಸ್ಥಿತಿ ನಿರ್ಮಿಸಿ NHM ನೌಕರರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ NHM ನೌಕರರನ್ನು ಖಾಯಂಗೊಳಿಸುವ ವಾಗ್ದಾನ ನೀಡಿತ್ತು, ವಾಗ್ದಾನ ಈಡೇರಿಸುವುದಿರಲಿ ಸದ್ಯ ಸಂಬಳವನ್ನೂ ನೀಡದೇ, ಉದ್ಯೋಗ ಅಭದ್ರತೆ ಸೃಷ್ಟಿಸಿ ಸಾವಿರಾರು ನೌಕರರು ನಿತ್ಯವೂ ನರಳುವಂತೆ ಮಾಡಿರುವ ಈ ದಪ್ಪಚರ್ಮದ ಸರ್ಕಾರದ ತಾತ್ಸಾರ ಧೋರಣೆ ಖಂಡನೀಯ.
ಆರೋಗ್ಯ ಇಲಾಖೆಯನ್ನೂ ಹಾಗೂ ಇಲಾಖೆಯ ನೌಕರರನ್ನು ಈ ಪರಿಯಾಗಿ ನಿರ್ಲಕ್ಷಿಸುವುದನ್ನು ಗಮನಿಸಿದರೆ ಆರೋಗ್ಯ ಕ್ಷೇತ್ರದ ಕುರಿತು ಈ ಸರ್ಕಾರಕ್ಕಿರುವ ತಾತ್ಸಾರ ಧೋರಣೆಯನ್ನು ಸಾಕ್ಷೀಕರಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.