ನವದೆಹಲಿ: ಇತ್ತೀಚಿಗಷ್ಟೇ ಕರ್ನಾಟಕಕ್ಕೆ ಪಿಎಂ ಇ ಡ್ರೈವ್ಯೋಜನೆ ಅಡಿಯಲ್ಲಿ 4500 ಎಲೆಕ್ಟ್ರಿಕ್ ಬಸ್ ನೀಡುವ ಬೆನ್ನಲ್ಲೇ, ಹೈದರಾಬಾದ್ ನಗರ ಸಾರಿಗೆ ಸಂಸ್ಥೆಗೆ 2000 ಬಸ್ ಗಳನ್ನು ಹಂಚಿಕೆ ಮಾಡುವ ಮೂಲಕ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಿಗೆ ಭರ್ಜರಿ ಕೊಡುಗೆ ನೀಡಿ ಗಮನ ಸೆಳೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಸಂಜೆ ನವದೆಹಲಿಯ ಅಧಿಕೃತ ನಿವಾಸದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ (Revanth Reddy) ಅವರು ಧನ್ಯವಾದ ಹೇಳಿದರು.
ಉನ್ನತ ಅಧಿಕಾರಿಗಳು ಹಾಗೂ ಸಂಸದರ ಜತೆ ಭೇಟಿಯಾದ ಸಿಎಂ ರೇವಂತ್ ರೆಡ್ಡಿ ಅವರು, ಇನ್ನಷ್ಟು ಎಲೆಕ್ಟ್ರಿಕ್ ಬಸ್ ಗಳು ಬೇಕೆಂದು ಮನವಿ ಮಾಡಿದರು.
ಮುಂದಿನ ಹಂತದಲ್ಲಿ ಹಂಚಿಕೆ ಮಾಡುವುದಾಗಿ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ.
ಇದೇ ವೇಳೆ ತೆಲಂಗಾಣಕ್ಕೆ ಭೇಟಿ ನೀಡುವಂತೆ ಸಚಿವರನ್ನು ಸಿಎಂ ರೇವಂತ್ ರೆಡ್ಡಿ ಮನವಿ ಮಾಡಿದ್ದು, ಆದಷ್ಟು ಬೇಗ ಭೇಟಿ ನೀಡುವುದಾಗಿ ತಿಳಿಸಿದ ಕುಮಾರಸ್ವಾಮಿ ಹೇಳಿದ್ದಾರೆ.
ಒಂದೆಡೆ ಬಿಜೆಪಿ ಜತೆ ಮೈತ್ರಿ ಹೊಂದಿ, ಕೇಂದ್ರ ಸಚಿವರಾಗಿದ್ದರು, ಅಧಿಕಾರಾವಧಿಯಲ್ಲಿ ಮಲತಾಯಿ ಧೋರಣೆ ತೋರದೆ ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೂ ಇಲಾಖೆಯ ಸೌಲಭ್ಯ ನೀಡುತ್ತಿರುವ ಕುಮಾರಸ್ವಾಮಿ ಅವರ ನಿಲುವು, ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.