ಬೆಂಗಳೂರು: ಮೆಟ್ರೋ ನಿಲ್ದಾಣಗಳಲ್ಲಿ (Metro station) ಅಮೂಲ್ ಮಳಿಗೆ (Amul Shop) ತೆರೆಯುತ್ತಿರುವ ಕುರಿತು ಆಕ್ರೋಶ ವ್ಯಕ್ತವಾಗಿದ್ದರೆ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಇದೇ ನಿಲ್ದಾಣಗಳಲ್ಲಿ 8 ನಂದಿನಿ (Nandini) ಕೇಂದ್ರ ತೆರೆದು ಅಮೂಲ್ಗೆ ಸ್ಪರ್ಧೆಯೊಡ್ಡಲು ಆದೇಶ ನೀಡಿದ್ದಾರೆ.
ಆದರೆ ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕಾದ ವಿರೋಧ ಪಕ್ಷ ಬಿಜೆಪಿ (BJP) ನಾಯಕರಿಂದ ದ್ವಂದ್ವ ಹೇಳಿಕೆಗಳು ಬಂದಿದ್ದು, ಮುಜುಗರಕ್ಕೆ ಕಾರಣವಾಗುವ ಸಾಧ್ಯತೆ ಎದುರಾಗಿದೆ.
ಹೌದು ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಹಾಗೂ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ (CT Ravi)ರ ಅಭಿಪ್ರಾಯ ವಿಭಿನ್ನವಾಗಿದೆ.
ನಂದಿನಿ ಹಾಗೂ ಅಮುಲ್ ಎರಡೂ ಕೂಡಾ ನಮ್ಮದೇ ದೇಶದ ಬ್ರಾಂಡ್ಗಳು. ನಂದಿನಿ ನಮ್ಮ ರಾಜ್ಯದ್ದಾಗಿದೆ. ಎರಡು ಕೂಡಾ ರೈತರ ಸಂಸ್ಥೆಗಳಾಗಿದ್ದು, ಇಲ್ಲಿ ದ್ವೇಷ ಮಾಡುವ ಅಗತ್ಯವಿಲ್ಲ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಹೇಳಿದ್ದಾರೆ.
ಆದರೆ ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಮಳಿಗೆ ತೆರೆಯಲು ಅವಕಾಶ ನೀಡಿರುವ ಕಾಂಗ್ರೆಸ್ ಪಕ್ಷ ನಂದಿನಿ ಬ್ರ್ಯಾಂಡ್ ಅನ್ನು ಸರ್ವನಾಶ ಮಾಡಲು ಹೊರಟಿದೆ ಎಂದು ಆರ್ ಅಶೋಕ ಟ್ವೀಟ್ ಮಾಡಿದ್ದಾರೆ.
ಒಂದು ಕಡೆ ಹಾಲು ಉತ್ಪಾದಕರಿಗೆ ನೂರಾರು ಕೋಟಿ ಬಾಕಿ ಉಳಿಸಿಕೊಂಡಿದೆ. ಮತ್ತೊಂದು ಕಡೆ ಅತ್ಯಂತ ಬೇಡಿಕೆ ಇರುವ ರೆಡಿ ಮೇಡ್ ಇಡ್ಲಿ, ದೋಸೆ ಹಿಟ್ಟು, ವೇ ಪ್ರೋಟೀನ್ ಸೇರಿದಂತೆ ಅನೇಕ ಹೊಸ ಉತ್ಪನ್ನಗಳ ಮೂಲಕ ನಂದಿನಿ ಬ್ರ್ಯಾಂಡ್ ನ ಮಾರುಕಟ್ಟೆ ವಿಸ್ತರಿಸಲು ಅತ್ಯಂತ ಉತ್ಸಾಹ ಮತ್ತು ಬದ್ಧತೆ ತೋರಿದ್ದ ದಕ್ಷ ಅಧಿಕಾರಿ ಕೆಎಂಎಫ್ ಎಂಡಿ ಶ್ರೀ ಎಂ.ಕೆ.ಜಗದೀಶ್ ಅವರನ್ನ ರಾಜ್ಯ ಸರ್ಕಾರ ದಿಢೀರನೆ ವರ್ಗಾವಣೆ ಮಾಡಿತ್ತು.
ಈಗ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಡೈರಿ ಮಳಿಗೆಗಳನ್ನು ಸ್ಥಾಪಿಸಲು ಕರೆದಿದ್ದ ಟೆಂಡರ್ ನಲ್ಲಿ ಭಾಗವಹಿಸಲೂ ಆಸಕ್ತಿ ತೋರಿಲ್ಲ.
ನಮ್ಮ ನಾಡಿನ ರೈತರು, ನಿಷ್ಠಾವಂತ ಗ್ರಾಹಕರು ಕಷ್ಟಪಟ್ಟು ಕಟ್ಟಿರುವ ನಂದಿನಿ ಬ್ರ್ಯಾಂಡ್ ಅನ್ನ ಸರ್ವನಾಶ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಶಪಥ ಮಾಡಿದಂತಿದೆ ಎಂದು ಆರ್ ಅಶೋಕ್ ಹೇಳಿದ್ದಾರೆ.
ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆಗಳ ಸ್ಥಾಪನೆಗೆ ಅವಕಾಶ ನೀಡಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಕರ್ನಾಟಕದಲ್ಲಿ ನಂದಿನಿಗೆ ಮೊದಲು ಆದ್ಯತೆ ನೀಡಬೇಕು. ನಂದಿನಿಗೆ ಅವಕಾಶ ಕೊಡದೇ ನಿರಾಕರಿಸಿದರೆ ಅದು ತಪ್ಪಾಗುತ್ತದೆ. ಆದರೆ ಎರಡೂ ಕೂಡಾ ಸ್ಪರ್ಧೆಯಲ್ಲಿದೆ.
ಅಮುಲ್ ಹಾಗೂ ನಂದಿನಿ ಸಂಸ್ಥೆಗಳು ವಿಲೀನ ಆಗುವ ಬಗ್ಗೆ ಹಿಂದೆ ಚರ್ಚೆ ಆಗಿತ್ತು. ನಂದಿನಿಯ ಒಳ್ಳೆಯ ಟೆಕ್ನಾಲಜಿಯನ್ನು ಅಮುಲ್ ಬಳಸಿಕೊಳ್ಳಬೇಕು. ಅಮುಲ್‌ನ ಒಳ್ಳೆಯ ಟೆಕ್ನಾಲಜಿಯನ್ನು ನಂದಿನಿ ಅಳವಡಿಸಿಕೊಳ್ಳಬೇಕು ಎಂದರು.
ನಮ್ಮ ನಂದಿನಿ ಬೇರೆ ಕಡೆಗಳಲ್ಲೂ ಮಳಿಗೆ ತರೆದಿದೆ. ಉತ್ತರ ಪ್ರದೇಶ, ದೆಹಲಿ, ಮುಂಬೈನಲ್ಲೂ ಮಳಿಗೆಗಳನ್ನು ತೆರೆದಿದೆ. ಅದು ತನ್ನ ಸಾಮರ್ಥ್ಯವನ್ನು ಗಳಿಸಿಕೊಳ್ಳೋದು.
ಸ್ಪರ್ಧೆಯಲ್ಲೂ ಭಾಗವಹಿಸಿ ಮೆಟ್ರೋ ಮಾತ್ರ ಅಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲೂ ತನ್ನ ಮಳಿಗೆಗಳನ್ನು ತೆರೆಯಿವಷ್ಟು ಸಾಮರ್ಥ್ಯ ನಂದಿನಿಗೆ ಬರಲಿ ಎಂದು ನಾನು ಆಶಿಸುತ್ತೇನೆ. ಇದಕ್ಕೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಹಾಗೂ ಬಿಎಂಆರ್‌ಸಿಎಲ್ ಚಿಂತನೆ ಮಾಡಬೇಕು. ಎಲ್ಲೆಲ್ಲಿ ಅಮುಲ್ ಮಳಿಗೆಗೆ ಅವಕಾಶ ಕೊಟ್ಟಿದ್ದೀರಿ ನಂದಿನಿಗೂ ಮಳಿಗೆಯನ್ನು ಮೀಸಲಿಡಿ. ಆಗ ನಂದಿನಿಯೂ ಇರುತ್ತದೆ, ಅಮುಲ್ ಕೂಡಾ ಇರುತ್ತದೆ. ಸ್ಪರ್ಧೆ ಚೆನ್ನಾಗಿ ಆಗುತ್ತದೆ. ಆರೋಗ್ಯಕರ ಸ್ಪರ್ಧೆ ಇರುತ್ತದೆ. ಇದು ನನ್ನ ಸಲಹೆ. ಎಲ್ಲದಕ್ಕೂ ಟೀಕೆ, ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ ಎಂದು ಸಿಟಿ ರವಿ ಹೇಳುವ ಮೂಲಕ ಆರ್ ಅಶೋಕ್ ಹೇಳಿಕೆಯನ್ನು ಅಲ್ಲಗೆಳೆದಿದ್ದಾರೆ.