ದೊಡ್ಡಬಳ್ಳಾಪುರ: ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಸೋಮವಾರ ತಡ ರಾತ್ರಿ ಇಬ್ಬರು ವ್ಯಕ್ತಿಗಳ ನಡುವೆ ಹೊಡೆದಾಟ ನಡೆದಿದ್ದು, ಈ ವೇಳೆ ಹಿಂದೂಪುರ ಮೂಲದ ಬಾಲು (40 ವರ್ಷ) ಮೃತಪಟ್ಟಿದ್ದಾನೆ. ಈತ ಕೂಲಿ ಕಾರ್ಮಿಕನಾಗಿದ್ದು ಕೆಲಸಕ್ಕೆಂದು ಬಂದಿದ್ದ ಎನ್ನಲಾಗಿದೆ.
ಆರಂಭದಲ್ಲಿ ಹಿಟ್ ಅಂಡ್ ರನ್ ಪ್ರಕರಣ ಎಂದು ಶಂಕಿಸಲಾಗಿತ್ತು. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರು ತನಿಖೆ ನಡೆಸಿದಾಗ, ವ್ಯಕ್ತಿಯೋರ್ವ ಹತ್ಯೆ ಮಾಡಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.