ಕೆ.ಎಂ. ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ನಗರಸಭೆ (Doddaballapur Municipal Council) ವತಿಯಿಂದ 2026-27ನೇ ಸಾಲಿನ ಆಯ-ವ್ಯಯ (Budget) ಕುರಿತ ಸಾರ್ವಜನಿಕ ಸಮಾಲೋಚನೆಯ ಸಭೆ ನಗರದ ಡಾ.ರಾಜ್ ಕುಮಾರ್ ಕಲಾ ಮಂದಿರದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್ ಅಧ್ಯಕ್ಷತೆಯಲ್ಲಿ ನಡೆಯಿತು. ಆದರೆ ಸಭೆಯಲ್ಲಿ ಸಾರ್ವಜನಿಕರು ಗಮನಕ್ಕೆ ತಂದ ಸಮಸ್ಯೆಗಳು, ಆಡಳಿತ ಮಂಡಳಿಯ ವೈಪಲ್ಯವನ್ನು ಎತ್ತಿತೋರುವಂತಿತ್ತು.
ಹೌದು ಇಂದು ಎರಡನೇ ಬಾರಿಗೆ ನಡೆದ ಸಭೆಯಲ್ಲಿ ನಗರಸಭೆ ಬಜೆಟ್‌ನಲ್ಲಿ ಹಣ ಮೀಸಲಿಗಷ್ಟೇ ಸೀಮಿತವಾಗಿದ್ದು, ಅದರ ಬಳಕೆಯತ್ತ ಕ್ರಮ ಕೈಗೊಳ್ಳುತ್ತಿಲ್ಲ. ಸಾರ್ವಜನಿಕರಿಂದ ಸ್ವೀಕರಿಸುವ ಸಲಹೆ ಸೂಚನೆಗಳನ್ನು ಆಯವ್ಯಯದಲ್ಲಿ ಸೇರ್ಪಡೆ ಮಾಡುವಾಗ ಗಂಭೀರವಾಗಿ ಪರಿಗಣಿಸುವುದಿಲ್ಲ. ನಗರದ ನೈರ್ಮಲ್ಯ, ಪರಿಸರ ಸಂರಕ್ಷಣೆ ಮೊದಲಾಗಿ ಮೂರ್ನಾಲ್ಕು ವರ್ಷಗಳಿಂದ ನೀಡಿರುವ ಯಾವುದೇ ಸಲಹೆಗಳು ಕಾರ್ಯಾಗತವಾಗಿಲ್ಲ. ಸಾರ್ವಜನಿಕ ಸಮಾಲೋಚನಾ ಸಭೆ ನಾಮಕಾವಸ್ತೆಯಾಗುತ್ತಿದೆ. ಬಜೆಟ್ ಸಭೆಯಲ್ಲಿ ಚರ್ಚೆ ನಡೆಸುವ ವಿಚಾರಗಳು ಕಾರ್ಯಗತವಾಗಬೇಕಿದೆ ಎಂದು ಸಭೆಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಯುವ ಸಂಚಲನದ ಚಿದಾನಂದ ಮೂರ್ತಿ ಮಾತನಾಡಿ, ನಾಗರಕೆರೆ ಅಭಿವೃದ್ದಿಗೆ ಮೀಸಲಿರಿಸಿದ 10 ಲಕ್ಷ ರೂ ಅನುದಾನ ಬಳಕೆಯಾಗುತ್ತಿಲ್ಲ. ನಗರದ ಪ್ಲಕ್ಸ್ಗಳ ಹಾವಳಿಗೆ ಕಡಿವಾಣ ಹಾಕುತ್ತಿಲ್ಲ. ಜಾಹಿರಾತು ಶುಲ್ಕಗಳನ್ನು ವಸೂಲಿ ಮಾಡುತ್ತಿಲ್ಲ. ಮಳೆ ನೀರು ಕೊಯ್ಲಿಗೆ ಮೀಸಲಿರಿಸಿರುವ ಅನುದಾನ ಬಳಕೆಯಾಗಬೇಕು. ಜೀವಿ ವೈವಿದ್ಯ ಮಂಡಲಿಯೊಂದಿಗೆ ನಗರಸಭೆ ಜಲ ಮೂಲಗಳನ್ನು ಸಂರಕ್ಷಿಸಬೇಕು. ಪ್ರಸ್ತುತ ನಗರಸಭೆಯಾಗಿರುವ ದೊಡ್ಡಬಳ್ಳಾಪುರ ಪುರಸಭೆ ರೂಪುಗೊಂಡು 100 ವರ್ಷಗಳು ಸಂದಿದ್ದು, ಇದರ ಶತಮಾನೋತ್ಸವ ಆಚರಣೆ ಮಾಡಿ, ಸ್ಮರಣ ಸಂಚಿಕೆ ಹೊರತರಬೇಕು ಎಂದು ಆಗ್ರಹಿಸಿದರು.
ಕರವೇ ಮುಖಂಡರಾದ ಚಂದ್ರಶೇಖರ್, ಅನಿಕೇತನ ಟ್ರಸ್ಟ್ ಕಾರ್ಯದರ್ಶಿ ಡಿ.ಶ್ರೀಕಾಂತ ಮಾತನಾಡಿ, ಬೀದಿ ನಾಯಿಗಳ ಹಾವಳಿ ನಿಯಂತ್ರಣವಾಗುತ್ತಿಲ್ಲ. ಘನತ್ಯಾಜ್ಯವನ್ನು ಎಲ್ಲಂದರಲ್ಲಿ ಸುರಿಯುವ ನಾಗರಿಕರ ಮೇಲೆ ಮಾರ್ಷಲ್ಗಳನ್ನು ನೇಮಿಸಿ ದಂಡ ವಿಧಿಸುವ ಕುರಿತು ಕ್ರಮ ಕೈಗೊಂಡಿಲ್ಲ. ವಾಣಿಜ್ಯ ಮಳಿಗೆಗಳು ನಿರ್ಮಾಣವಾಗಿಲ್ಲ. ಸಂಚಾರಿ ದೀಪಗಳ ವ್ಯವಸ್ಥೆ ಆಗಬೇಕು. ಮುಖ್ಯವಾಗಿ ನಗರದಲ್ಲಿ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚಲು ಸಿ.ಸಿ.ಟಿವಿ ಕ್ಯಾಮರಾ ಅಳವಡಿಕೆಗೆ ಹಣ ಮೀಸಲಿದ್ರೂ ಆಗುತ್ತಿಲ್ಲ ಎಂದರು.
ಮುಖಂಡರಾದ ಗಂಗರಾಜು ಶಿರವಾರ, ರಾಜು ಸಣ್ಣಕ್ಕಿ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಅನಧಿಕೃತವಾಗಿ ಒತ್ತುವರಿ ಮಾಡಿರುವವರನ್ನು ತೆರವು ಮಾಡುವುದು ಕಷ್ಟಸಾಧ್ಯವಲ್ಲ. ನಗರಸಭೆಗೆ ಆದಾಯ ತರುವ ಕಲ್ಯಾಣ ಮಂದಿರಗಳು, ಪೆಟ್ರೋಲ್ ಬಂಕ್ಗಳು ಮೊದಲಾದ ವಾಣಿಜ್ಯ ಸಂಕೀರ್ಣಗಳಲ್ಲಿ ತೆರಿಗೆ ವಸೂಲಾತಿ, ಘನತ್ಯಾಜ್ಯ ನಿರ್ವಹಣೆ ಶುಲ್ಕಗಳನ್ನು ವಸೂಲಿ ಮಾಡಬೇಕು.
ಪೌರ ಕಾರ್ಮಿಕರಿಗೆ ಉಪಹಾರ ನೀಡುವುದಕ್ಕೆ ಶೇ.24.10 ಅನುದಾನದ ಬಳಕೆ ಮಾಡುವುದು ಸರಿಯಲ್ಲ. ಈ ಬಗ್ಗೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದರು.
ಓಬದೇನಹಳ್ಳಿ ಬಳಿ ಮೀಸಲಿರಿಸಿದ ನಗರಸಭೆ ಜಾಗದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಲುಇರುವ ಅಡೆತಡೆಗಳನ್ನು ನಿವಾರಿಸಿ, ಶೀಘ್ರ ನಿರ್ಮಾಣ ಮಾಡಬೇಕು ಎಂದು ಮುಖಂಡರಾದ ಚೌಡರಾಜ್ ಸಲಹೆ ನೀಡಿದರು.
ಕಸಾಪ ಮಾಜಿ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಮಾತನಾಡಿ, ಮಹಿಳಾ ಸಮಾಜ ಸ್ಥಾಪಕಿ ಭೀಮಕ್ಕ ಅವರ ಹೆಸರನ್ನು ನಗರದ ಯಾವುದಾದರೂ ರಸ್ತೆಗೆ ಹೆಸರಿಡಬೇಕು. ಬಜೆಟ್ನ ಪ್ರತಿ ಸಿದ್ದಗೊಳಿಸುವಾಗ ಲೋಪಗಳಾಗದಂತೆ ಎಚ್ಚರ ವಹಿಸಬೇಕು ಎಂದರು.
ಸಭೆಯಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ನಗರದ ಸ್ವಚ್ಛತೆ, ಪರಿಸರ, ರಸ್ತೆ ಅಗಲೀಕರಣ, ಸಿಸಿಟಿವಿ ಅಳವಡಿಕೆ ಭದ್ರತೆ ಮೊದಲಾದ ವಿಚಾರಗಳಲ್ಲಿ ಸಾರ್ವಜನಿಕರ ಸಲಹೆಗಳನ್ನು ನಗರಸಭೆ ಗಂಭೀರವಾಗಿ ಪರಿಗಣಿಸಬೇಕಿದೆ. ನಗರಸಭೆಗೆ ಬರುವ ಆದಾಯ ಮೂಲಗಳನ್ನು ನಿರ್ಲಕ್ಷಿಸದೇ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ.
ನಗರದಲ್ಲಿ ಎಲ್ಲಂದರಲ್ಲಿ ಬಿಸಾಡುತ್ತಿರುವ ಕಸದ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ನಾಗರಿಕರಿಂದ ನಗರಸಭೆಗೆ ಗ್ರಂಥಾಲಯ, ಆರೋಗ್ಯ, ಬಿಕ್ಷುಕರು, ಸಾರಿಗೆ ಮೊದಲಾದ ಕರವನ್ನು ತೆರಿಗೆಯೊಂದಿಗೆ ಕಟ್ಟಿಸಿಕೊಂಡು ಸಂಬಂಧಿಸಿದ ಇಲಾಖೆಗೆ ನೀಡಲಾಗುತ್ತಿದೆ. ಆದರೆ ಆಯಾ ಇಲಾಖೆಗಳಿಂದ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಪೌರಾಯುಕ್ತ ಆರ್.ಕಾರ್ತಿಕೇಶ್ವರ, ಸರ್ವ ಸದಸ್ಯರ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಲಾಗುವುದು. ಬಜೆಟ್ನಲ್ಲಿ ಹಣ ಮೀಸಲಿಟ್ಟಾಗ ಮಾತ್ರಮ ವಿವಿಧ ಯೋಜನೆಗಳಿಗೆ ಬಳಕೆ ಮಾಡಲು ಸಾಧ್ಯ. ಆದಷ್ಟೂ ಅನುದಾನ ಬಳಕೆಗೆ ಒತ್ತು ನೀಡಲಾಗುವುದು ನಾಗರಿಕರ ಸಲಹೆಗಳನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.