ಬೆಂಗಳೂರು: ಅಲ್ಲಿ ಇದ್ದಿದ್ದು ಕಣ್ಣು ಕೋರೈಸುತ್ತಿದ್ದ ಲೇಸರ್ ಬೆಳಕಿನ ಲೀಲೆ; ಅದರ ಝಗಮಗದ ನಡುವೆ ಹಿಂಬಾಗಿಲ ಮೂಲಕ ಕಾಣಿಸಿಕೊಂಡಿದ್ದು ಖ್ಯಾತ ನಟಿ ತಮನ್ನಾ ಭಾಟಿಯಾ (Tamannaah Bhatia). ಹಾಲ್ಬಣ್ಣದ ಈ ಚೆಲುವೆಯ ಸೌಂದರ್ಯಕ್ಕೆ ಮೆರುಗು ನೀಡಿದ್ದು ತಿಳಿಗೆಂಪು ಬಣ್ಣದ ಐಕಾನಿಕ್ ಮೈಸೂರು ಸಿಲ್ಕ್ ಸೀರೆ.
ಇದಕ್ಕೆಲ್ಲ ಕಾರಣವಾಗಿದ್ದು ನಾಡಿನ ಮತ್ತೊಂದು ಐಕಾನಿಕ್ ಉತ್ಪನ್ನ ಮೈಸೂರು ಸ್ಯಾಂಡಲ್ ಸೋಪ್! ಇವೆಲ್ಲ ಸೇರಿಕೊಂಡು, ತಮನ್ನಾ ಅವರು ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಕೆಎಸ್‌ಡಿಎಲ್ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿ ಮಂಗಳವಾರ ಹೊಸ ಅಧ್ಯಾಯವನ್ನು ವಿಧ್ಯುಕ್ತವಾಗಿ ಆರಂಭಿಸಿದರು. ಇದಕ್ಕೆ ವೇದಿಕೆಯಾಗಿದ್ದು ತಾಜ್ ವೆಸ್ಟ್ ಎಂಡ್ ಹೋಟೆಲಿನ ಝಗಮಗಿಸುವ ಸಭಾಂಗಣ.

ಹೌದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹಾಗೂ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರ ನೇತೃತ್ವದಲ್ಲಿ ಕೆಎಸ್‌ಡಿಎಲ್, ಹೊಸ ಯುಗಕ್ಕೆ ಕಾಲಿಟ್ಟಿದೆ. ಇದಕ್ಕೆ ಸಾಕ್ಷಿಯಾಗಿ ಹಾಲುಬಣ್ಣದ ಬೆಡಗಿ ತಮನ್ನಾ ವಿಶೇವಾಗಿ ಸಿದ್ಧಪಡಿಸಿದ್ದ ವೇದಿಕೆ ಮೇಲೆ ಬೆಳಕಿನ ಹೊನಲಿನಲ್ಲಿ ನಗೆ ಸೂಸುತ್ತ ಪ್ರತ್ಯಕ್ಷರಾದರು.
ಹೊಚ್ಚಹೊಸ ಪ್ಯಾಕ್‌ನ ರೂಪ ತಾಳಿರುವ ಮೈಸೂರು ಸ್ಯಾಂಡಲ್ ಸೋಪ್ ಜತೆಗೆ ಸಂಸ್ಥೆಯ 57 ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.
ಹೀಗೆ ನವನವೀನ ಪ್ಯಾಕಿಂಗ್ ಪಡೆದುಕೊಂಡಿರುವ ಉತ್ಪನ್ನಗಳಲ್ಲಿ ಗಂಧದ ಎಣ್ಣೆ, ಮಲ್ಲಿಗೆ (ಜಾಸ್ಮೀನ್) ಪರಿಮಳದ ಸೋಪು, ಸುಗಂಧದ್ರವ್ಯ, ಟೂತ್ ಪೇಸ್ಟ್, ಕೊಬ್ಬರಿ ಎಣ್ಣೆ, ಪೆಟ್ರೋಲಿಯಂ ಜೆಲ್ಲಿ, ಸಾವಯವ ಉತ್ಪನ್ನಗಳವರೆಗೆ 60 ಉತ್ಪನ್ನಗಳಿವೆ. ಇದರೊಂದಿಗೆ ಕೆಎಸ್‌ಡಿಎಲ್‌ನ ಮುಂದಿನ ಹಾದಿ ಅಲ್ಲಿ ತೆರೆದುಕೊಂಡಿತು. ಜೊತೆಯಲ್ಲೇ ತಮನ್ನಾ ಸಂಸ್ಥೆಯ ಪರವಾಗಿ ನಡೆಸಿರುವ ಪ್ರಚಾರದ ಹತ್ತಾರು ಜಾಹೀರಾತುಗಳು ಕೂಡ ಬಿಡುಗಡೆಯಾದವು. ಇದೇ ಸಂದರ್ಭದಲ್ಲಿ ಸಂಸ್ಥೆಯ ಇತಿಹಾಸವನ್ನು ಕಟ್ಟಿಕೊಡುವ ʻಸುಗಂಧ ಸಿರಿʼ ಮತ್ತು ʻಅರೋಮ್ಯಾಟಿಕ್ ಜರ್ನೀಸ್ʼ ಕಾಫಿ ಟೇಬಲ್ ಪುಸ್ತಕಗಳ ಲೋಕಾರ್ಪಣೆಯೂ ನೆರವೇರಿತು.
ಸಾಂಪ್ರದಾಯಿಕವಾಗಿ ಕಂಗೊಳಿಸುತ್ತಿದ್ದ ತಮನ್ನಾ ಮಾತನಾಡಿ, ʻಮೈಸೂರು ಸ್ಯಾಂಡಲ್ ಸೋಪು ಕೇವಲ ಒಂದು ಸಾಬೂನಲ್ಲ. ಇದರೊಂದಿಗೆ ಭಾವನೆಗಳು, ಬಾಲ್ಯ ಮತ್ತು ಸುಮಧುರ ನೆನೆಪುಗಳೆಲ್ಲ ಹೆಣೆದುಕೊಂಡಿವೆ. ಇದು ಪರಿಪೂರ್ಣತೆ ಮತ್ತು ಸತ್ಯಗಳ ಸಂಗಮ. ಮಾರುಕಟ್ಟೆಯಲ್ಲಿ ಇದಕ್ಕೆ ಸಾಟಿಯಾದ ಇನ್ನೊಂದು ಸೋಪ್ ಇಲ್ಲ. ಮೈಸೂರು ಸ್ಯಾಂಡಲ್ ಸೋಪ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಮುಂದಿನ ಎರಡು ವರ್ಷ ನಾನು ಈ ಗುಣಮಟ್ಟದ ಉತ್ಪನ್ನಗಳ ರಾಯಭಾರಿಯಾಗಿ ಕೆಲಸ ಮಾಡಲಿದ್ದೇನೆ,ʼ ಎಂದು ಬಣ್ಣಿಸಿದರು.
ಬಳಿಕ ಮಾತನಾಡಿದ ಸಚಿವ ಎಂ ಬಿ ಪಾಟೀಲ, ʻಕೆಎಸ್‌ಡಿಎಲ್ ಕೇವಲ ಸ್ಯಾಂಡಲ್ ಸೋಪ್‌ಗೆ ಮಾತ್ರ ಸೀಮಿತವಾಗಿಲ್ಲ. ನಾವೀಗ ಜಾಸ್ಮೀನ್ ಪರಿಮಳದ ಐಷಾರಾಮಿ ಸೋಪನ್ನೂ ತಯಾರಿಸುತ್ತಿದ್ದೇವೆ. ಮಲ್ಲಿಗೆಯ ತೈಲ ಲೀಟರಿಗೆ 4 ಲಕ್ಷ ರೂಪಾಯಿಗೂ ಜಾಸ್ತಿ ಇದೆ. ನಮ್ಮಲ್ಲಿ ತಯಾರಾಗುವ ಈ ಸೋಪ್‌ಗೆ 400 ರೂಪಾಯಿ ಇಟ್ಟಿದ್ದೇವೆ. ಯೂರೋಪಿನ ಮಾರುಕಟ್ಟೆಯಲ್ಲಿ ಈ ತರಹದ ಸಾಬೂನಿಗೆ ಭಾರೀ ಬೇಡಿಕೆ ಇದೆ. ಇದೇ ರೀತಿಯಲ್ಲಿ ಸುಗಂಧ ದ್ರವ್ಯಗಳ ವಲಯವನ್ನೂ ಪ್ರವೇಶಿಸಿದ್ದೇವೆ. ಇದಕ್ಕಾಗಿ ಸಂಸ್ಥೆಯ ಉನ್ನತಾಧಿಕಾರಿಗಳು ಕೊಯಮತ್ತೂರು, ಕನೌಜ್‌ಗೆ ತೆರಳಿ, ಒಡಂಬಡಿಕೆ ಮಾಡಿಕೊಂಡು ಬಂದಿದ್ದಾರೆʼ ಎಂದರು.
ಜತೆಗೆ, ಕೆಎಸ್‌ಡಿಎಲ್ ಉತ್ಪನ್ನಗಳ ಪೈಕಿ ಸದ್ಯಕ್ಕೆ ಶೇಕಡ 1ರಷ್ಟು ಮಾತ್ರ ರಫ್ತಾಗುತ್ತಿದೆ. ಇದನ್ನು ಹೆಚ್ಚು ಮಾಡಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಹೊಸ ಉತ್ಪನ್ನಗಳಲ್ಲಿ ಮಹಾರಾಜ ಮತ್ತು ಮಹಾರಾಣಿ ಸೀರೀಸ್ ಇವೆ. ಪರಂಪರೆಯ ಮಹತ್ವವನ್ನು ಬಿಟ್ಟುಕೊಡದೆ ಸಮಕಾಲೀನ ಅಭಿರುಚಿಯನ್ನು ಇಲ್ಲಿ ಬೆಸೆದಿದ್ದೇವೆ ಎಂದು ಅವರು ನುಡಿದಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಸಿ ಎಸ್ ಅಪ್ಪಾಜಿ ನಾಡಗೌಡ ಮಾತನಾಡಿ, ʻಈ ಸಾಲಿನಲ್ಲಿ ಸಂಸ್ಥೆಯ ವಹಿವಾಟು 2,000 ಕೋಟಿ ರೂ. ಮುಟ್ಟಲಿದ್ದು, ಲಾಭವು 500 ಕೋಟಿ ರೂ. ದಾಟಲಿದೆ. ಇದಕ್ಕಾಗಿ ಆಧುನಿಕ ವಹಿವಾಟು ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ 3 ಕೋಟಿ ಫಾಲೋಯರ್ಸ್ ಹೊಂದಿರುವ, ಅಖಿಲ ಭಾರತ ಮಟ್ಟದ ವರ್ಚಸ್ಸಿರುವ ತಮನ್ನಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿರುವುದು ಇದರ ಒಂದು ಭಾಗವಾಗಿದೆʼ ಎಂದಿದ್ದಾರೆ.
ಕೆಎಸ್ ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಎಂ. ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸ್ವತಂತ್ರ ನಿರ್ದೇಶಕ ಅರವಿಂದ ಗಲಗಲಿ, ತಾಂತ್ರಿಕ ಸಲಹೆಗಾರ ರಜನೀಕಾಂತ್, ಶಿವಕುಮಾರ್, ಪ್ರತಿಮಾ ವಂದಗಾರು, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ, ಸ್ವತಂತ್ರ ನಿರ್ದೇಶಕ ಶಾಮರಾಜು ಮುಂತಾದವರು ಉಪಸ್ಥಿತರಿದ್ದರು.