
ಬೆಂಗಳೂರು: ವಿಧಾನಸೌಧದ ನಿಗದಿತ ಸ್ಥಳದಲ್ಲಿ ಮಾತ್ರವೇ ಮಾಧ್ಯಮಗಳು (Media) ಅಧಿಕೃತ ಹೇಳಿಕೆ ಪಡೆಯಬೇಕು ಹಾಗೂ ಮುಖ್ಯಮಂತ್ರಿ ಮತ್ತು ಸಚಿವರು ವಿಧಾನಸೌಧ ಪ್ರವೇಶಿಸುವಾಗ ಅವರನ್ನು ಹಿಂಬಾಲಿಸಿ ವಿಡಿಯೋ ಹೇಳಿಕೆ ಪಡೆಯದಂತೆ ನಿರ್ದೇಶಿಸಬೇಕೆಂದು ವಾರ್ತಾ ಇಲಾಖೆಗೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಪತ್ರ ಬರೆದಿದೆ.
ಕೆಲ ದಿನಗಳ ಹಿಂದೆ ವಿಧಾನಸೌಧದಲ್ಲಿನ ಕಚೇರಿ ಬಳಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಚಿನ್ನಾಭರಣ ಕಳವಾಗಿತ್ತು. ಈ ಸಂಬಂಧ ಸರಕಾರಿ ನೌಕರನೊಬ್ಬನನ್ನು ಬಂಧಿಸಲಾಗಿತ್ತು.
ಈ ಬೆಳವಣಿಗೆಯ ಬೆನ್ನಲ್ಲೇ ಭದ್ರತೆ ಹಿತದೃಷ್ಟಿಯಿಂದ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ನಿಗದಿಪಡಿಸಿರುವ ಸ್ಥಳದಲ್ಲಿ ಮಾತ್ರವೇ ವಿಡಿಯೊ ಹೇಳಿಕೆ ಪಡೆಯಬೇಕು. ಸಿಎಂ.ಡಿಸಿಎಂ ಹಾಗೂ ಸಚಿವರು ಆಗಮಿಸುವಾಗ ಅವರನ್ನು ಹಿಂಬಾಲಿಸಿ ಬೈಟ್ ಅಥವಾ ಸಂದರ್ಶನ ಮಾಡಕೂಡದು.
ಈ ಬಗ್ಗೆ ಮಾಧ್ಯಮಗಳಿಗೆ ನಿರ್ದೇಶಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಯದುಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.