ರಾಯಚೂರು (ಸಿಂಧನೂರು): ಬಹುತೇಕ ಖಾಸಗಿಯವರ ಪಾಲಾಗಲಿದ್ದ ವಿಶಾಖಪಟ್ಟಣದಲ್ಲಿರುವ ರಾಷ್ಟ್ರೀಯ ಉಕ್ಕು ಕಾರ್ಖಾನೆ (RINL) ಉಳಿಸಿದ ಘನಕೀರ್ತಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರಿಗೆ ಸಲ್ಲುತ್ತದೆ ಎಂದು ಆಂಧ್ರ ಪ್ರದೇಶದ ಮಾಹಿತಿ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ನಾ.ರಾ. ಲೋಕೇಶ್ (NA.Ra. Lokesh) ಅವರು ಹೇಳಿದರು.

ವಿಶಾಖ ಉಕ್ಕು ಆಂಧ್ರುಲ ಹಕ್ಕು ಎನ್ನುವ ನಿನಾದದಂತೆ ನಾವು ವೈಜಾಗ್ ಸ್ಟೀಲ್ ಬಗ್ಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿದ್ದೇವೆ. ಆದರೆ, ನಮ್ಮ ರಾಜ್ಯದ ಹಿಂದಿನ ಸರ್ಕಾರದ ತಪ್ಪು ನೀತಿಗಳಿಂದಾಗಿ ಆ ಕಾರ್ಖಾನೆಯು ಮುಚ್ಚಲ್ಪಡುವ ಅಥವಾ ಖಾಸಗಿಯವರ ಪಾಲಾಗುವ ಅಪಾಯವನ್ನು ಎದುರಿಸುತ್ತಿತ್ತು. ಕುಮಾರಸ್ವಾಮಿ ಕೇಂದ್ರದ ಉಕ್ಕು ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಈ ಕಾರ್ಖಾನೆಯನ್ನು ಉಳಿಸಿಕೊಡುವ ಭರವಸೆ ನೀಡಿದರು. ಕೊಟ್ಟ ಮಾತಿನಂತೆ ಕಾರ್ಖಾನೆಯನ್ನು ಕುಮಾರಸ್ವಾಮಿ ಅವರು ಕಾರ್ಖಾನೆಯನ್ನು ಉಳಿಸಿದರು. ಇವತ್ತು ಆ ಕಾರ್ಖಾನೆ ಲಾಭದ ದಾರಿಯಲ್ಲಿ ನಡೆಯುತ್ತಿದೆ ಎಂದು ಲೋಕೇಶ್ ಹೇಳಿದರು.
ವಿಶಾಖಪಟ್ಟಣ ಸಂಸದರಾದ ಶ್ರೀಭರತ್ ಅವರಿಗೆ ನಾನು ಯಾವಾಗಲೂ ಒತ್ತಡ ಹಾಕುತ್ತಿದ್ದೆ. ನೀವು ದೆಹಲಿಗೆ ಹೋದಾಗಲಿಲ್ಲ ತಪ್ಪದೇ ಸಚಿವರಾದ ಕುಮಾರಸ್ವಾಮಿಯವರನ್ನು ಭೇಟಿಯಾಗಿ ವೈಜಾಗ್ ಕಾರ್ಖಾನೆಯನ್ನು ಉಳಿಸುವ ಬಗ್ಗೆ ಮಾತನಾಡಿ ಎಂದು ಹೇಳುತ್ತಿದ್ದೆ. ಅದರಂತೆ ಭರತ್ ಅವರು ಕೂಡ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮನವಿ ಮಾಡುತ್ತಿದ್ದರು. ಒಮ್ಮೆ ಹೀಗೆ ಅವರಿಬ್ಬರೂ ಭೇಟಿಯಾದಾಗ ಮೊಬೈಲ್ ಮೂಲಕ ನನ್ನನ್ನು ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿಸಿದರು.
ನಾನು ಅವರಲ್ಲಿ ಒಂದೇ ಮನವಿಯನ್ನು ಮಾಡಿಕೊಂಡೆ. ತಾವು ಹೇಗಾದರೂ ಮಾಡಿ ಈ ಕಾರ್ಖಾನೆಯನ್ನು ಉಳಿಸಿಕೊಡಬೇಕು ಎಂದು ಕೋರಿದೆ. ಕುಮಾರಸ್ವಾಮಿ ಅವರು ಒಂದೇ ಮಾತು ಹೇಳಿದರು, “ಬ್ರದರ್ ನೀವು ನಿಶ್ಚಿಂತೆಯಿಂದ ಇರಿ. ಕಾರ್ಖಾನೆಯ ವಿಷಯವನ್ನು ನನಗೆ ಬಿಡಿ” ಎಂದು ಹೇಳಿದರು. ಅದರಂತೆ ಅವರು ವೈಜಾಗ್ ಉಕ್ಕು ಕಾರ್ಖಾನೆಯನ್ನು ಉಳಿಸಿಕೊಟ್ಟಿದ್ದಾರೆ. ಇದಕ್ಕಾಗಿ ಇಡೀ ಆಂಧ್ರ ಪ್ರದೇಶದ ಜನರು ಕುಮಾರಸ್ವಾಮಿಯವರಿಗೆ ಋಣಿಯಾಗಿದ್ದೇವೆ ಎಂದು ನಾ.ರಾ. ಲೋಕೇಶ್ ಹೇಳಿದರು.
ಅಷ್ಟೇ ಅಲ್ಲ ಕೆಲವೇ ದಿನಗಳ ಹಿಂದೆ ಆಂಧ್ರ ಪ್ರದೇಶದ ಅನಕಾಪಲ್ಲಿಯಲ್ಲಿ ಅರ್ಸಿಲರ್ ಮಿತ್ತಲ್ ಮತ್ತು ನಿಫಾನ್ ಸ್ಟಿಲ್ ಕಂಪನಿಗಳ ಸಹಯೋಗದಲ್ಲಿ ದೇಶದಲ್ಲಿ ಅತಿದೊಡ್ಡ ಗ್ರೀನ್ ಸ್ಟಿಲ್ ಉತ್ಪಾದನಾ ಸ್ಥಾವರ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಆ ಕಾರ್ಖಾನೆ ಆಂಧ್ರ ಪ್ರದೇಶಕ್ಕೆ ಬರಲು ಕುಮಾರಸ್ವಾಮಿಯವರೇ ಮೂಲ ಕಾರಣ ಎಂದು ಲೋಕೇಶ್ ಕೃತಜ್ಞತೆಗಳನ್ನು ಸಲ್ಲಿಸಿದರು.
ನಮ್ಮ ಕುಟುಂಬಕ್ಕೂ ಮತ್ತು ಕುಮಾರಸ್ವಾಮಿ ಅವರು ಕುಟುಂಬಕ್ಕೂ ಅತ್ಯಂತ ಆಳವಾದ ಬಾಂಧವ್ಯ ಇದೆ. ಕಳೆದ 30 ವರ್ಷಗಳ ಹಿಂದೆ ಕೇಂದ್ರದಲ್ಲಿ ಸಂಯುಕ್ತ ರಂಗ ಸರ್ಕಾರ ಇದ್ದಾಗ ನಮ್ಮ ತಂದೆಯವರಾದ ಚಂದ್ರಬಾಬು ನಾಯ್ಡು ಅವರು ಸಂಚಾಲಕರಾಗಿದ್ದರು. ಆಗ ಮಣ್ಣಿನ ಮಗ ಹೆಚ್.ಡಿ. ದೇವೇಗೌಡರು ಈ ರಾಷ್ಟ್ರದ ಪ್ರಧಾನಿಯಾಗಿದ್ದರು. ಈಗ ಕುಮಾರಸ್ವಾಮಿಯವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಅವರ ಪಕ್ಕದಲ್ಲಿ ಇವತ್ತು ನಿಂತು ಮಾತನಾಡುವ ಭಾಗ್ಯ ನನಗೆ ಸಿಕ್ಕಿದೆ. ಇದಕ್ಕಾಗಿ ಆ ಭಗವಂತನಿಗೆ ಧನ್ಯವಾದಗಳು ಅರ್ಪಿಸುತ್ತಿದ್ದೇನೆ ಎಂದು ಲೋಕೇಶ್ ಭಾವುಕರಾದರು.