ದೊಡ್ಡಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ (Narendra modi) ಆವರ ಮಿತ್ರ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕಿತಾಪತಿ ದಿನೇ ದಿನೇ ಭಾರತೀಯರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದು, ಈಗಾಗಲೇ ವಾಣಿಜ್ಯ ಗ್ಯಾಸ್ (Gas) ಸಿಗದೆ ಹೋಟೆಲ್ ಮಾಲೀಕರು, ಕಾರ್ಮಿಕರು ಬಸವಳಿದಿರುವ ಬೆನ್ನಲ್ಲೇ, ನೂರಾರು ಆಟೋ (Auto) ಚಾಲಕರು ಗ್ಯಾಸ್ ಸಿಗದೆ ಕಣ್ಣೀರು ಹಾಕುತ್ತಾ ಪರದಾಡುತ್ತಿದ್ದಾರೆ.

ಹೌದು ಆಟೋ ಗ್ಯಾಸ್ ಕೊರತೆ ದೊಡ್ಡಬಳ್ಳಾಪುರದ ಆಟೋ ಚಾಲಕರಿಗೆ ತೀವ್ರ ಸಂಕಷ್ಟಕ್ಕೆ ಕಾರಣವಾಗಿದ್ದು, ಆಟೋಗಳನ್ನೆ ನಂಬಿ ಜೀವನ ನಡೆಸುವ ಬಡ ಆಟೋ ಚಾಲಕರು ಪರದಾಡುವಂತಾಗಿದೆ.
ಅಮೇರಿಕಾ ಮತ್ತು ಇಸ್ರೆಲ್ ಸೇರಿಕೊಂಡು ಇರಾನ್ ಮೇಲೆ ನಡೆಸುತ್ತಿರುವ ಯುದ್ಧದ ಪರಿಣಾಮ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆಯಾಗಿದ್ದು, ದೊಡ್ಡಬಳ್ಳಾಪುರದಲ್ಲಿ ಆಟೋ ಗ್ಯಾಸ್ ಪೂರೈಕೆಯಲ್ಲಿ ಕಳೆದ ಮೂರು ದಿನಗಳಿಂದ ವ್ಯತ್ಯಯ ಉಂಟಾಗಿದೆ.
ಇದರಿಂದಾಗಿ ಆಟೋ ಚಾಲಕರು ತೀವ್ರವಾದ ಸಮಸ್ಯೆಗೆ ಸಿಲುಕಿದ್ದಾರೆ.
ಇಂದು ಎಲ್ಐಸಿ ಕಚೇರಿ ಸಮೀಪದ ಗ್ಯಾಸ್ ಪೂರೈಕೆ ಘಟಕಕ್ಕೆ 700 ಕೆಜಿ ಗ್ಯಾಸ್ ಪೂರೈಕೆಯಾಗಿದ್ದು, ಗ್ಯಾಸ್ ಅನ್ಲೋಡ್ ಆಗುವ ಮುನ್ನವೇ ವಿಷಯ ತಿಳಿದ 400ಕ್ಕೂ ಹೆಚ್ಚು ಆಟೋ ಚಾಲಕರು ಗ್ಯಾಸ್ ಬಂಕ್ ಬಳಿ ಜಮಾಯಿಸಿದ್ದಾರೆ.
ಇದರಿಂದಾಗಿ ಈ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಆಟೋಗಳನ್ನು ಸಾಲುಗಟ್ಟಿ ನಿಲ್ಲುವ ವ್ಯವಸ್ಥೆ ಮಾಡಿದ್ದು, ಎಲ್ಲರಿಗೂ ದೊರಕುವಂತೆ ತಲಾ 500 ರೂಗೆ ಗ್ಯಾಸ್ ಲೋಡ್ ಮಾಡಳು ಸೂಚನೆ ನೀಡಿದ್ದಾರೆ.
ಗ್ಯಾಸ್ ತುಂಬಿಸಿಕೊಳ್ಳಲೆಂದು ಬಂದಿರುವ ಆಟೋಗಳು ಚಿಕ್ಕಪೇಟೆವರೆಗೂ ನೂರಾರು ಸಾಲುಗಟ್ಟಿ ನಿಂತಿವೆ.