ದೊಡ್ಡಬಳ್ಳಾಪುರ; ರಾಜ್ಯದ 40 ಸಾವಿರ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಕೆಪಿಎಸ್- ಮ್ಯಾಗ್ನೆಟ್ ಯೋಜನೆಯ ಅಡಿಯಲ್ಲಿ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 359 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಇಸ್ಲಾಂಪುರ ಮತ್ತು ಅರಳು ಮಲ್ಲಿಗೆ ಸರ್ಕಾರಿ ಶಾಲೆಗಳನ್ನು ರೋಝೀಪುರ ಕೆಪಿಎಸ್-ಮ್ಯಾಗ್ನೆಟ್ ಶಾಲೆಗೆ ವಿಲೀನ ಮಾಡುವುದ್ದನ್ನು ವಿರೋಧಿಸಿ ಇಸ್ಲಾಂಪುರ ಮತ್ತು ಸಂಜಯ್ ನಗರ, ವೀರಭದ್ರ ಪಾಳ್ಯ ಏರಿಯಾದಲ್ಲಿ AIDSO ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ, ವಿದ್ಯಾರ್ಥಿ – ಪೋಷಕರ ಪ್ರತಿಭಟನಾ ಸಭೆಗಳನ್ನು ನಡೆಸಲಾಯಿತು.

ಸಭೆಯನ್ನು ಉದ್ದೇಶಿಸಿ AIDSO ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಮಾತನಾಡುತ್ತ, ಸರ್ಕಾರಿ ಶಾಲೆಗಳು ನಮ್ಮ ಹಳ್ಳಿಗಳ ಸಾಮಾಜಿಕ ಕೇಂದ್ರಗಳಾಗಿದ್ದು, ಕೆಪಿಎಸ್-ಮ್ಯಾಗ್ನೆಟ್ ಯೋಜನೆ ಮತ್ತು ಪಿಪಿಪಿ ಮಾದರಿಯ ಮೂಲಕ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವ ಸರ್ಕಾರದ ಸಂಚನ್ನು ನಾವೆಲ್ಲರೂ ವಿರೋಧಿಸಬೇಕು ಎಂದರು.

ಸರ್ಕಾರಿ ಶಾಲೆಗಳನ್ನು ಮುಚ್ಚಲು Asian Development Bank ನಿಂದ 2,500 ಸಾವಿರ ಕೋಟಿ ಸಾಲವನ್ನು ಪಡೆದಿದ್ದು, 100ಕ್ಕೂ ಹೆಚ್ಚು ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ಬಡ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ದೂರದ ಶಾಲೆಗಳಿಗೆ ಬಸ್ನಲ್ಲಿ ಮಕ್ಕಳನ್ನು ಕಳುಹಿಸುವುದು ಸುರಕ್ಷಿತವಲ್ಲ ಮತ್ತು ಇದು ಕೇವಲ ಜನರನ್ನು ಮರಳು ಮಾಡುವ ತಂತ್ರವಷ್ಟೇ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಚನ್ನಪಟ್ಟಣದ ತಾಲೂಕಿನಲ್ಲಿ ಮುಚ್ಚಲು ಹೊರಟಿರುವ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಹೋರಾಟನಿರತರಾಗಿರುವ ಪೋಷಕರಂತೆ, ಈ ವ್ಯಾಪ್ತಿಯ ಪೋಷಕರು ಸಹ, ಶಾಲೆಯನ್ನು ಉಳಿಸಿಕೊಳ್ಳಲು ಬಲಿಷ್ಠವಾದ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.
ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ಕೃಷ್ಣ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ 69,000 ಶಿಕ್ಷಕರ ಹುದ್ದೆಗಳು ಖಾಲಿ ಇದೆ, ಇನ್ನೂ ಭರ್ತಿ ಮಾಡುತ್ತಿಲ್ಲ. ಈಗ ಇರೋ ಶಾಲೆಗಳನ್ನು ಮುಚ್ಚಿದರೆ ಎಷ್ಟೋ ಶಿಕ್ಷಕರು ಕೆಲಸ ಕಳೆದುಕೊಳ್ಳಬೇಕಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆಯನ್ನು AIDSO ಬೆಂಗಳೂರು ಜಿಲ್ಲಾ ಸೆಕ್ರೆಟೇರಿಯಟ್ ಸದಸ್ಯರಾದ ತುಳಸಿರವರು ವಹಿಸಿದ್ದರು.
ಸಭೆಯ ಕೊನೆಯಲ್ಲಿ, ಮುಂದಿನ ಹಂತದ ಹೋರಾಟಕ್ಕಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯನ್ನು ರಚಿಸಲಾಯಿತು.