ದೆಹಲಿ: ಅಮೆರಿಕ ಮತ್ತು ಇಸ್ರೇಲ್ ಜತೆಗೂಡಿ ಇರಾನ್ ವಿರುದ್ದ ನಡೆಸುತ್ತಿರುವ ಯುದ್ಧ ಸೋಮವಾರ 38ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧದ ಕಾರಣವಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದರಿಂದ ನೈಸರ್ಗಿಕ ಅನಿಲ ಮತ್ತು ಎಲ್ಪಿಜಿ (LPG) ಪೂರೈಕೆ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಯವಾಗಿದೆ.

ಪರಿಣಾಮವಾಗಿ ಭಾರತದಲ್ಲಿ ಮೊದಲಿಗೆ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಸರಬರಾಜಿನಲ್ಲಿ ಮತ್ತು ಆಟೊಗ್ಯಾಸ್ ಪೂರೈಕೆಯಲ್ಲಿ ಕೊರತೆ ಎದುರಾಗಿದೆ.
ಅಡುಗೆ ಅನಿಲ ಸಿಲಿಂಡರ್ ಸರಬರಾಜು ವಿಚಾರವಾಗಿ ಆತಂಕದಲ್ಲಿದ್ದ ಜನಕ್ಕೆ ‘ದೇಶದಲ್ಲಿ ಎಲ್ಪಿಜಿ ಕೊರತೆ ಇಲ್ಲ. ಅಡುಗೆ ಅನಿಲ ಸಾಕಷ್ಟು ಲಭ್ಯವಿದೆ. ಜನರು ಆತಂಕ ಪಡಬೇಕಿಲ್ಲ’ ಎಂದು ಕೇಂದ್ರ ಸರಕಾರ ಅಭಯ ನೀಡಿದೆ.
ಅಲ್ಲದೇ ತುರ್ತು ಸ್ಥಿತಿಗೆ ಅನುಕೂಲವಾಗಲಿದೆ ಎಂದು 5 ಕೆಜಿ ಗ್ಯಾಸ್ ಸಿಲಿಂಡರ್ಗಳ ಪೂರೈಕೆಯನ್ನೂ ಹೆಚ್ಚಿಸಿದೆ.
5 ಕೆಜಿ ಎಲ್ಪಿಜಿ ಸಿಲಿಂಡರ್ ಎಲ್ಲಾ ಏಜೆನ್ಸಿಗಳಲ್ಲೂ ಲಭ್ಯವಿವೆ. ಯಾವುದಾದರೊಂದು ಗುರುತಿನ ಚೀಟಿ ತೋರಿಸಿ ಗ್ರಾಹಕರು ಸಿಲಿಂಡರ್ ಖರೀದಿಸಬಹುದು ಎಂದು ಸರಕಾರ ಹೇಳಿದೆ. ಮಾ.23ರಿಂದ 6.60 ಲಕ್ಷದಷ್ಟು 5 ಕೆಜಿ ಸಿಲಿಂಡರ್ ಮಾರಾಟವಾಗಿವೆ.
ಎಲ್ಪಿಜಿ ಬದಲು ಪೆಟ್ರೋಲ್ ಬಳಸಿ
ಪೆಟ್ರೋಲ್ ಸದಾಕಾಲ ಲಭ್ಯವಿರುವ ಇಂಧನ. ಸದ್ಯದ ಮಟ್ಟಿಗೆ ಆಟೋ ಚಾಲಕರು ಎಲ್ಪಿಜಿ (LPG) ಬದಲಿಗೆ ಪೆಟ್ರೋಲ್ ಬಳಸುವುದು ಸೂಕ್ತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಲಹೆ ನೀಡಿದ್ದಾರೆ
ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಸುಮಾರು 70 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲದ ಸಂಗ್ರಹವಿದೆ. ನಿರಂತರವಾಗಿ ತೈಲ ಪೂರೈಕೆ ಆಗುತ್ತಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ.
ವಾಣಿಜ್ಯ ಸಿಲಿಂಡರ್ಗಳ ವಿತರಣೆಯನ್ನು ಶೇ.70ಕ್ಕೆ ಹೆಚ್ಚಿಸಲಾಗಿದೆ. ಶೇ.60ರಷ್ಟು ಎಲ್ಪಿಜಿಯನ್ನು ದೇಶದಲ್ಲೇ ಉತ್ಪಾದಿಸಲಾಗುತ್ತಿದೆ. ಶೇ.40ರಷ್ಟು ಆಮದು ಮಾಡಿಕೊಳ್ಳುತ್ತಿದ್ದೇವೆ. ಜಾಗತಿಕ ಮಟ್ಟದಲ್ಲಿ ಆಟೊ ಎಲ್ಪಿಜಿ ಸಂಪನ್ಮೂಲಗಳು ಸೀಮಿತ ವಾಗಿವೆ. ವಿಶ್ವದ ಕೆಲವೇ ದೇಶಗಳಲ್ಲಿ ಆಟೋ ಎಲ್ ಪಿಜಿ ಲಭ್ಯವಿದೆ ಎಂದರು.
ಸರಕಾರಿ ಒಡೆತನದ 72 ಸೇರಿದಂತೆ ರಾಜ್ಯದಲ್ಲಿ 372 ಆಟೋ ಎಲ್ಪಿಜಿ ವಿತರಣಾ ಕೇಂದ್ರಗಳಿವೆ. ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಾದ ಹಿನ್ನೆಲೆ ಯಲ್ಲಿ ಖಾಸಗಿ ಕಂಪನಿಗಳು ಪ್ರತಿ ಕೆಜಿ ಎಲ್ಪಿಜಿ ದರವನ್ನು 110 ರು.ಗೆ ಏರಿಸಿವೆ. ಸರಕಾರಿ ಒಡೆತನದ ಕೇಂದ್ರಗಳಲ್ಲಿ ಆಟೋ ಎಲ್ಪಿಜಿ ದರ ಪ್ರತಿ ಕೆಜಿಗೆ 89 ರು. ಇದೆ. ಹೀಗಾಗಿ, ಈ ಕೇಂದ್ರಗಳಲ್ಲಿ ಎಲ್ ಪಿಜಿಗೆ ಆಟೋಗಳ ಉದ್ದನೆಯ ಸರತಿ ಸಾಲು ಕಂಡುಬರುತ್ತಿದೆ ಎಂದು ಪ್ರತಿಕ್ರಿಯೆ ನೀಡಿದರು.
ಗ್ಯಾಸ್ ಸಮಸ್ಯೆಯನ್ನು ಕೇಂದ್ರ ಸರಕಾರ ಸಮರ್ಥವಾಗಿ ನಿಭಾಯಿಸಿದೆ. ಗೃಹ ಬಳಕೆ ಗ್ಯಾಸ್ಗೆ ಸಮಸ್ಯೆಯಾಗಿಲ್ಲ. ನಾವು ಮೊದಲೇ ಯೋಜನೆ ಮಾಡಿದ್ದರಿಂದ ಸಮಸ್ಯೆ ಆಗಿಲ್ಲ ಎಂದು ಹೇಳಿದರು.