ದೊಡ್ಡಬಳ್ಳಾಪುರ (Harithalekhani): ಕಣಿವೆ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ಮಧ್ಯಾಹ್ನ ಉಗ್ರರ ದಾಳಿ ನಡೆದಿದ್ದು, ಇಷ್ಟು ದಿನ ಸೇನಾ ಪಡೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಉಗ್ರರು ಈಗ ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದಾರೆ.
ಲಷ್ಕರ್-ಎ-ತೊಯ್ದಾದ ಸ್ಥಳೀಯ ಅಂಗಸಂಸ್ಥೆಯಾದ ಪಾಕಿಸ್ತಾನದ ಉಗ್ರ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಪಹಲ್‌ಗಾಮ್‌ನ ಬೈಸರನ್ ವ್ಯಾಲಿಯ ಹುಲ್ಲು ಗಾವಲಿನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ಗುಂಪು ಗುಂಡಿನ ದಾಳಿ ನಡೆಸಿದೆ.
ಈ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ರಾವ್, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಭರತ್ ಭೂಷಣ್ ಸೇರಿ ದೇಶದ ವಿವಿಧ 28 ಪ್ರವಾಸಿಗರು, ಓರ್ವ ಸ್ಥಳೀಯ ಕುದುರೆ ಸವಾರಿಗ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ.
ಉಗ್ರರ ದಾಳಿ ಕುರಿತು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ನಡುವೆ, ಓ ಹೋ ಹೋ ಪ್ರೇಮ ಕಾಶ್ಮೀರ ಎಂದು ದೊಡ್ಡಬಳ್ಳಾಪುರ ತಾಲೂಕಿನಿಂದ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ 95 ಮಂದಿ ಪ್ರವಾಸಿಗರು ದೇವರ ಕೃಪೆಯಿಂದ ಉಗ್ರರ ದಾಳಿಗೆ ಸಿಲುಕದ ಪಾರಾಗಿರುವ ಮಾಹಿತಿ ಹರಿತಲೇಖನಿಗೆ ಲಭ್ಯವಾಗಿದೆ.
ಕೂದಲೆಳೆ ಅಂತರದಲ್ಲಿ ಪಾರು
ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ, ಲಕ್ಷ್ಮೀದೇವಿಪುರ, ತಿರುಮಗೊಂಡನಹಳ್ಳಿ, ತಿಮ್ಮೋಜನಹಳ್ಳಿ, ತೂಬಗೆರೆ, ಹೀರೆ ಮುದ್ದೇನಹಳ್ಳಿ, ನೆಲಗುದಿಗೆ ಗ್ರಾಮಗಳಿಂದ ಸುಮಾರು 95 ಮಂದಿ 9 ದಿನಗಳ ಜಮ್ಮುಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ.

ಏ.19 ರಂದು ಬೆಳಗ್ಗೆ ಎರಡು ತಂಡಗಳಾಗಿ ವಿಮಾನಗಳಲ್ಲಿ 21 ಮಂದಿಯ ಒಂದು ತಂಡ ಅಮೃತಸರ ತಲುಪಿದರೆ, ಟಿಕೆಟ್ ಗೊಂದಲದ ಕಾರಣ 74 ಮಂದಿಯ ಮತ್ತೊಂದು ತಂಡ ದೆಹಲಿಗೆ ತೆರಳಿ ಅಲ್ಲಿಂದ ಅಮೃತಸರಕ್ಕೆ ತೆರಳಿ ಒಟ್ಟಾಗಿದ್ದಾರೆ.
ಅಮೃತಸರದಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಬಳಿಕ ಶ್ರೀ ನಗರಕ್ಕೆ ಪ್ರವಾಸ ತೆರಳಿದ್ದರು. ಇವರು ಉಳಿದುಕೊಳ್ಳಬೇಕಾದ ಹೋಟೆಲ್ ಉಗ್ರರ ದಾಳಿಗೆ ಒಳಗಾದ ಪಹಲ್‌ಗಾಮ್‌ನ ಬೈಸರನ್ ಸಮೀಪದಲ್ಲಿಯೇ ಎರಡು ದಿನಗಳ ಕಾಲ 45 ರೂಂ ನಿಗದಿಯಾಗಿತ್ತು.
ಆದರೆ ಅದೃಷ್ಟವಶಾತ್ ಆ ರಸ್ತೆಯಲ್ಲಿನ ಬೆಟ್ಟ ಕುಸಿದು ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡ ಕಾರಣ, ಮಾರ್ಗ ಬದಲಿಸಿದ ದೊಡ್ಡಬಳ್ಳಾಪುರದ 95, ಬೆಂಗಳೂರಿನ 15 ಮಂದಿ ಸೇರಿದಂತೆ ಒಬ್ಬ 110 ಮಂದಿಯ ಪ್ರವಾಸಿಗರು, ಕಟ್ರಾ ವೈಷ್ಣವಿ ದೇವಿಯ ದರ್ಶನ ಮುಗಿಸಿ, ಕೊನುಮನಾಲಿಗೆ ಹಿಂತಿರುಗಿದ್ದಾರೆ.
ಒಂದು ವೇಳೆ ನಿರ್ಣಯದಂತೆ ಶ್ರೀನಗರಕ್ಕೆ ತೆರಳುವ ಮಾರ್ಗದಲ್ಲಿನ ಬೆಟ್ಟ ಕುಸಿಯದೇ ಇದ್ದಲ್ಲಿ ದೊಡ್ಡಬಳ್ಳಾಪುರದಿಂದ ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿರುವ ಪ್ರವಾಸಿಗರು ಕೂಡ ಉಗ್ರರ ದಾಳಿಯಿಂದ ತೊಂದರೆಗೆ ಒಳಗಾಗುತ್ತಿದರು ಎಂಬ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ.

ಶ್ರೀನಗರದಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಕಾಶ್ಮೀರ ಪ್ರವಾಸಕ್ಕೆ ತೆರಳಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರವಾಸಿಗರ ಕುರಿತು ಗ್ರಾಮಸ್ಥರು, ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದರು, ಆದರೆ ದೇವಾಲಯಗಳ ದರ್ಶನ ಬಳಿಕ ಮೊಬೈಲ್ ಆನ್ ಮಾಡಿದ ಪ್ರವಾಸಿಗರೆಲ್ಲರೂ ಸಂಪರ್ಕಕ್ಕೆ ದೊರಕಿದ ಕಾರಣ ನಿಟ್ಟಿಸಿರು ಬಿಟ್ಟಿದ್ದಾರೆ.