ದೊಡ್ಡಬಳ್ಳಾಪುರ: ಮಡದಿಗೆ ಉಂಟಾಗಿದ್ದ ಅನಾರೋಗ್ಯ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಮನೆಗೆ ಕರೆದೊಯ್ಯುತ್ತಿದ್ದ ವ್ಯಕ್ತಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾವನಪ್ಪಿರುವ ಘಟನೆ (Accident) ತಾಲೂಕಿನ ಅರಳು ಮಲ್ಲಿಗೆ ಕೆರೆ ಏರಿ ಮೇಲೆ ಸಂಭವಿಸಿದೆ.
ಮೃತನನ್ನು ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಉಜ್ಜನಿ ಮೂಲದ ಜೆಸಿಬಿ ಚಾಲಕ ಅಶೋಕ (35 ವರ್ಷ) ಎಂದು ಗುರುತಿಸಲಾಗಿದೆ.
ಮೃತನು ಮಡದಿ ಹಾಗೂ ಮಗುವಿನೊಂದಿಗೆ ಕರೀಂಸೊಣ್ಣೇನಹಳ್ಳಿಯಲ್ಲಿ ವಾಸವಿದ್ದು, ಭಾನುವಾರ ಸಂಜೆ ಮಡದಿಗೆ ಅನಾರೋಗ್ಯದ ಕಾರಣ ಆಲಹಳ್ಳಿಯಲ್ಲಿ ಚಿಕಿತ್ಸೆಗೆ ದ್ವಿಚಕ್ರ ವಾಹನದ ಮಗುವಿನೊಂದಿಗೆ ಕರೆತಂದಿದ್ದಾನೆ.
ಚಿಕಿತ್ಸೆ ಬಳಿಕ ದ್ವಿಚಕ್ರ ವಾಹನದಲ್ಲಿ ಮತ್ತೆ ಮನೆಗೆ ತೆರಳುವ ವೇಳೆ ಅರಳು ಮಲ್ಲಿಗೆ ಕೆರೆ ಕಟ್ಟೆಯ ಮೇಲೆ ಹಿಂದಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅಶೋಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಾವನಪ್ಪಿದ್ದು, ಆತನ ಮಡದಿ ಹಾಗು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.