ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಯ (Guarantee scheme) ಕುಂದುಕೊರತೆ ಸಭೆ ನಾಳೆ (ಫೆ.12) ರಂದು ತಾಲೂಕಿನ ಸಾಸಲು, ಆರೂಢಿ, ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯಲಿದೆ.
ಈ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್. ವಿಶ್ವನಾಥ ರೆಡ್ಡಿ ( Vishwanath Reddy) ಅವರ ಅಧ್ಯಕ್ಷತೆಯಲ್ಲಿ ಈ ಶಿಬಿರವನ್ನು ಆಯೋಜಿಸಲಾಗುತ್ತಿದೆ.
ಫೆ.12 ರಂದು ಬೆಳಗ್ಗೆ 11.00 ಗಂಟೆಗೆ ಸಾಸಲು ಗ್ರಾಮಪಂಚಾಯಿತಿ, ಅಪರಾಹ್ನ 12.30ಕ್ಕೆ ಆರೂಢಿ ಗ್ರಾಮಪಂಚಾಯಿತಿ ಹಾಗೂ ಮಧ್ಯಾಹ್ನ 3.00 ಗಂಟೆಗೆ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕುಂದುಕೊರತೆ ಸಭೆ ನಡೆಯಲಿದೆ.
ಈ ಕುಂದುಕೊರತೆ ಸಭೆಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿನ ನೋಂದಣಿ ಬಾಕಿ, ತಾಂತ್ರಿಕ ದೋಷಗಳು, ಬಸ್ ಸೌಲಭ್ಯ, ಐಟಿ ಮತ್ತು ಜಿಎಸ್ಟಿ ವ್ಯಾಪ್ತಿಯ ಮಹಿಳೆಯರ ಪರಿಶೀಲನೆ ಉಚಿತ ವಿದ್ಯುತ್ ಯೋಜನೆ ಪಡೆಯಲು ತೊಡಕು ಮುಂತಾದ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ದೊರಕಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುತ್ತಿದೆ.
ಕುಂದುಕೊರತೆ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.