ಕೆ.ಎಂ.ಸಂತೋಷ್, ಆರೂಢಿ, (ದೊಡ್ಡಬಳ್ಳಾಪುರ): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯುವುದು ಸೇರಿದಂತೆ ಕಾರ್ಮಿಕ ವಿರೋಧಿ ಮಸೂದೆ ಗಳನ್ನು ರದ್ದುಪಡಿಸುವಂತೆ ಹಾಗೂ ಮನ್ರೇಗಾ ಮರು ಜಾರಿ, ಸಾರ್ವಜನಿಕ ಸೇವೆಗಳ ಖಾಸಗೀಕರಣ ರದ್ದತಿಗೆ ಒತ್ತಾಯಿಸಿ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲಿಸಿ, ಇಂದು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವಿವಿಧ ಕಾರ್ಮಿಕ ಸಂಘಗಳಿಂದ ಬಂದ್ (Bandh) ನಡೆಸಲಾಯಿತು. ಮುಷ್ಕರಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದವು.
ಗುರುವಾರ ಬೆಳಿಗ್ಗೆ ಕಾರ್ಮಿಕ ಸಂಘಟನೆಗಳ ಮುಖಂಡರು, ಬೈಕ್ ರ್ಯಾಲಿ ನಡೆಸಿ, ಸ್ವಯಂ ಪ್ರೇರಿತ ಬಂದ್ ಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ವರ್ತಕರು ಮಾರುಕಟ್ಟೆ ಪ್ರದೇಶ, ಎಪಿಎಂಸಿ ಮೊದಲಾದ ಕರೆ ಮಧ್ಯಾಹ್ನದವರೆಗೆ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬಂದ್ ಬೆಂಬಲಿಸಿದರು. ಕೈಗಾರಿಕಾ ಪ್ರದೇಶದಲ್ಲಿ ಶೇ. 60 ರಷ್ಟು ಕಾರ್ಖಾನೆಗಳು ಕಾರ್ಯ ನಿರ್ವಹಿಸಲಿಲ್ಲ. ಚಿತ್ರಮಂದಿರಗಳ ಪ್ರದರ್ಶನ ಸ್ಥಗಿತವಾಗಿತ್ತು.

ಉಳಿದಂತೆ ಬಸ್ ಸಂಚಾರ ಎಂದಿನಂತಿತ್ತು. ಶಾಲಾಕಾಲೇಜುಗಳು, ಕಚೇರಿಗಳು ಕಾರ್ಯ ನಿರ್ವಹಿಸಿದವು. ಅಲ್ಲದೆ ಬಹುತೇಕ ಜನ ಜೀವನ ಎಂದಿನಂತಿತ್ತು.
ದೊಡ್ಡಬಳ್ಳಾಪುರ ನಗರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಸಿದ್ದಲಿಂಗಯ್ಯ ವೃತ್ತದ ಬಳಿ ಸೇರಿದ ನೂರಾರು ಕಾರ್ಮಿಕರು ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರು.
ಬಹಿರಂಗ ಸಭೆಯಲ್ಲಿ ಮಾತನಾಡಿದ ಕಾರ್ಮಿಕ ಮುಖಂಡರು, ಕೇಂದ್ರ ಸರ್ಕಾರ ಕಾರ್ಮಿಕರ ವಿರುದ್ಧ 4 ಕಾರ್ಮಿಕ ಮಸೂದೆ ಗಳನ್ನು ಜಾರಿಗೊಳಿಸಿರುವುದು ಕಾರ್ಮಿಕರಿಗೆ ಮಾರಕವಾಗಿದೆ. ತಮ್ಮ ಹಕ್ಕು ಭಾದ್ಯತೆಗಳನ್ನು ಉಳಿಸಿಕೊಳ್ಳಲು ಇದ್ದ, ಕಾರ್ಮಿಕ ಸಂಘಟನೆ, ಮುಷ್ಕರ, ಕೆಲಸದ ಅವಧಿ ಮೊದಲಾದ ಹಕ್ಕುಗಳನ್ನು ಈ ಮಸೂದೆಯಲ್ಲಿ ಕಿತ್ತುಕೊಂಡು ಕಾರ್ಮಿಕರನ್ನು ಶೋಷಣೆಗೆ ಗುರಿ ಮಾಡುತ್ತಿವೆ.
ಕಾರ್ಮಿಕರು ನೂರಾರು ವರ್ಷಗಳ ಕಾಲ ಹೋರಾಟ ಮಾಡಿ ಪಡೆದ ಹಕ್ಕುಗಳನ್ನು ನಿರಾಕರಿಸುತ್ತವೆ ಮತ್ತು ಮಾಲೀಕರ ಪರವಾಗಿವೆ. ಈ ಮಸೂದೆಗಳನ್ನು ರದ್ದುಗೊಳಿಸಬೇಕು. ಬಡವರ ಜೀವನಧಾರವಾಗಿರುವ ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ ಜಿ-ಬಿರಾಮ್‌ಜಿ ಕಾಯ್ದೆ ಹಾಗೂ ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು. ರಾಜ್ಯ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ಸೇವಾ ನಿಯಮಗಳನ್ನುರಚಿಸಬಾರದು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ಭೂಸುಧಾರಣಾ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ದೇಶದ ವಿದ್ಯುಚ್ಛಕ್ತಿ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿಲುವು ಬದಲಾಗಬೇಕು, ರೈತರಿಗೆ ಮಾರಕವಾಗಿರುವ ಬೀಜ ಮಸೂದೆ ಕಾಯ್ದೆಯನ್ನು ಹಿಂಪಡೆಯಬೇಕು, ವಿಮಾ ತಿದ್ದುಪಡಿ ಕಾಯ್ದೆ. ಶಾಂತಿ ಕಾಯ್ದೆರದ್ದುಗೊಳಿಸಿ ಕರ್ನಾಟಕ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ಈಗ ತಂದಿರುವ ಗೆಜೆಟ್ ನೋಟಿಫಿಕೇಷನ್ ಅನ್ನು ವಾಪಸ್ಸು ಪಡೆಯಬೇಕು. ಮತ್ತು ಒಕ್ಕೂಟ ಸರ್ಕಾರ ತಂದಿರುವ ಜನವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು. ಈ ನಿಟ್ಟಿನಲ್ಲಿ ಇಂದು ಕರೆ ನೀಡಿರುವ ಮುಷ್ಕರಕ್ಕೆ ವಿವಿಧ ಸಂಘಟನೆಗಳು ಬೆಂಬಲಿಸಿವೆ ಎಂದರು.
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘ, ಕನ್ನಡ ಪಕ್ಷದ ದಲಿತ ಸಂಘರ್ಷ ಸಮಿತಿ, ಸಿಪಿಎಂ, ಕನ್ನಡಪರ, ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ವಿವಿಧ ಕಾರ್ಖಾನೆಗಳ ಕಾರ್ಮಿಕ ಸಂಘಗಳು, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.