ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.
ದರ್ಶನ್‌ಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಾಗೂ ಚಿತ್ರರಂಗದ ಹಲವರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಕೆಲ ಅಭಿಮಾನಿಗಳು ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

ದರ್ಶನ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಭಿಮಾನಿಗಳು ವಿಶೇಷ CDPಗಳನ್ನು ಬಿಡುಗಡೆ ಮಾಡಿದ್ದಾರೆ. ದರ್ಶನ್ ಅಭಿಮಾನಿಗಳು ಯಾವುದೇ ಸಂದರ್ಭದಲ್ಲಿ ನಿಮ್ಮ ಕೈಬಿಡೆವು ಎಂಬಂತೆ ದರ್ಶನ್ ಅವರ ಕೈ ಹೈಡಿದು ನಿಂತಿರುವ ಚಿತ್ರವನ್ನು ಆಧರಿಸಿ ವಿನ್ಯಾಸಗೊಳಿಸಿರುವ ಈ CDPಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಮತ್ತೊಂದೆಡೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ದರ್ಶನ್ ಕೇಕ್ ಎದುರು ನಿಂತಿರುವ ಹಳೆಯ ಫೋಟೋವನ್ನು ಶೇರ್ ಮಾಡಿರುವ ಅವರು, ಪ್ರತಿ ದಿನವನ್ನೂ ಸಂಭ್ರಮಿಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಆ ಫೋಟೋದಲ್ಲಿ ದರ್ಶನ್‌ಗೆ ಇಷ್ಟವಾದ ಆನೆ ಆಕೃತಿಯ ಕೇಕ್ ಕೂಡ ಗಮನ ಸೆಳೆದಿದೆ.
ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದಲ್ಲಿ ನಟ ದರ್ಶನ್, ನ್ಯಾಯಾಂಗ ಬಂಧನದಲ್ಲಿರುವ ಇರುವ ಕಾರಣ ಈ ಬಾರಿ ಸಂಭ್ರಮವಿಲ್ಲದ ಹುಟ್ಟುಹಬ್ಬ ಆಚರಿಸಬೇಕಾದ ಅನಿವಾರ್ಯತೆ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ.