ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿನ ಎಂ.ಎಸ್.ಜಿ.ಪಿ (MSGP) ಕಸ ವಿಲೇವಾರಿ ಘಟಕಕ್ಕೆ ಬೃಹತ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಿಂದ ಕಸ ತುಂಬಿಕೊಂಡು ಹೆಚ್ಚುವರಿ ಲಾರಿಗಳು ಬರುತ್ತವೆ ಎಂಬ ಆತಂಕದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ತಾಲೂಕಿನ ದೊಡ್ಡಮಂಕಲಾಳ ಸಮೀಪ ಗ್ರಾಮಸ್ಥರು ತ್ಯಾಜ್ಯ ಹೊತ್ತುಬಂದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದ ಶಾಸಕ ಧೀರಜ್ ಮುನಿರಾಜು ಸ್ಥಳಕ್ಕೆ ಭೇಟಿ ನೀಡಿ, ಅಧಿಕೃತ ವಾಹನಗಳಿಗೆ ಮಾತ್ರ ಪ್ರವೇಶ ಎಂದು ಷರತ್ತು ವಿಧಿಸಿ, ವಾಹನಗಳ ದಾಖಲೆ ಪರಿಶೀಲನೆ ನಡೆಸಿದರು. ಈ ವೇಳೆ ಯಲಹಂಕ ವ್ಯಾಪ್ತಿಯ ಕಸ ತುಂಬಿಕೊಂಡು ಬಂದಿದ್ದ 4 ರಿಂದ 5 ಲಾರಿಗಳನ್ನು ವಾಪಸ್ ಕಳಿಸಲಾಯಿತು.
ಈ ವೇಳೆ ಬಹುತೇಕ ಲಾರಿ ಚಾಲಕರ ಪರವಾಗಿ, ಲಾರಿಯ ಸಾಮರ್ಥ್ಯ ನವೀಕರಣ ಸೇರಿದಂತೆ ಹಲವಾರು ನಿಯಮಗಳನ್ನು ಆರ್.ಟಿ.ಒ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿ, ದಂಡವಿಧಿಸಲಾಯಿತು.
ಮಹದೇವಪುರ ವ್ಯಾಪ್ತಿಯಲ್ಲಿನ ತ್ಯಾಜ್ಯ ವಿಲೇವಾರಿ ಘಟಕದ ಸಮೀಪದ ಗ್ರಾಮಸ್ಥರ ಪ್ರತಿಭಟನೆ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದ ಎಂಎಸ್‌ಜಿಪಿ ಘಟಕಕ್ಕೆ ಹೆಚ್ಚುವರಿ ಲಾರಿ ಬರಬಹುದೆಂಬ ಆತಂಕದಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು ಎಂದು ತಿಳಿದು ಬಂದಿದೆ.
ಅಲ್ಲದೆ ಈ ಹಿಂದೆ ಸ್ಥಳೀಯರ ಪ್ರತಿಭಟನೆಯಿಂದಾಗಿ ಗುಂಡ್ಲಹಳ್ಳಿಯಲ್ಲಿ ಮುಚ್ವಲಾಗಿದ್ದ ಟೆರ್ರಾ ಫಾರ್ಮ ಕಸ ವಿಲೇವಾರಿ ಘಟಕವನ್ನು ಮತ್ತೆ ಪ್ರಾರಂಭಿಸಲು ಸಿದ್ಧತೆಗಳು ನಡೆದಿರುವುದು ಈ ವ್ಯಾಪ್ತಿಯ ಜನರ ಆತಂಕ ಹೆಚ್ಚಾಗಲು ಕಾರಣವಾಗಿದೆ.