
ಬಳ್ಳಾರಿ: ಸಂಡೂರು ಉತ್ತರ ಮತ್ತು ದಕ್ಷಿಣ ವಲಯದ ಅರಣ್ಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಶ್ರೀಗಂಧ (Sandalwood) ಸಾಗಿಸುತ್ತಿದ್ದ ಇಬ್ಬರನ್ನು ಸೋಮವಾರ ಬಂಧಿಸಿದ್ದಾರೆ.
ಸುಶೀಲನಗರ ಗ್ರಾಮದ ಲೋಕೇಶ್ ನಾಯ್ಕ್ ಮತ್ತು ಕಿರಣ್ ಕುಮಾರ್ ಹೆಚ್.ಕೆ ಬಂಧಿತ ಆರೋಪಿಗಳು.

ಒಟ್ಟು 110 ಕೆಜಿ ಶ್ರೀಗಂಧದ ತುಂಡುಗಳು ಮತ್ತು ಸಾಗಾಣಿಕೆಗೆ ಬಳಸಿದ್ದ ಮಹೇಂದ್ರ ಮೊರಾಜೊ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆಂಧ್ರಪ್ರದೇಶದ ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆಯವರ ಸಹಕಾರದೊಂದಿಗೆ ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯ ರೋಲ್ಲ ಗ್ರಾಮದಲ್ಲಿರುವ ಮೆ.ನಿಷತ್ ಫ್ರೆಗ್ರೆನ್ಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಿ, ಅಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 179 ಕೆಜಿ ಶ್ರೀಗಂಧವನ್ನು ಜಪ್ತಿ ಮಾಡಲಾಗಿದ್ದು, ಜಪ್ತಿ ಮಾಡಿದ ಸರಕನ್ನು ಪೆನುಕೊಂಡ ಎಫ್‌ಆರ್‌ಓ ವಶಕ್ಕೆ ನೀಡಲಾಗಿದೆ.
ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ್, ಎಸಿಎಫ್ ಶರಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.
ಅರಣ್ಯ ಅಧಿಕಾರಿಗಳಾದ ಸಂಡೂರು ಉತ್ತರ ಆರ್‌ಎಫ್‌ಓ ಬಿ.ಎಸ್.ಮಂಜುನಾಥ್ ಮತ್ತು ಸಂಡೂರು ದಕ್ಷಿಣ ಆರ್‌ಎಫ್‌ಓ ಸೈಯದ್ ದಾದಾ ಖಲಂದರ್ ನೇತೃತ್ವ ವಹಿಸಿದ್ದರು.
ಡಿಆರ್‌ಎಫ್‌ಓ ಗಳಾದ ತಿಪ್ಪೇಸ್ವಾಮಿ, ಮಹೇಶ್, ಹೊನ್ನೂರಸ್ವಾಮಿ, ಶ್ರೀಧರ್ ಹಾಗೂ ಬೀಟ್ ಫಾರೆಸ್ಟರ್ ರಾಘವೇಂದ್ರ ಮತ್ತು ಸಿಬ್ಬಂದಿ ವರ್ಗ ತಂಡದಲ್ಲಿದ್ದರು.
ಮೂರು ದಿನಗಳ ಕಾರ್ಯಾಚರಣೆ ಮಾಡಿದ್ದು, ಪ್ರಕರಣದಲ್ಲಿ ಇದುವರೆಗೆ ಒಟ್ಟು 07 ಆರೋಪಿಗಳ ಮೇಲೆ ಕೇಸ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.