ದೊಡ್ಡಬಳ್ಳಾಪುರ (Doddaballapura); ಕಳೆದ 6 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸೆಕ್ಯುರಿಟಿ ಗಾರ್ಡ್ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವನ ಬುರುಡೆ ಮರದಲ್ಲಿ ನೇತಾಡುವ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ನಗರದ ಹೊರವಲಯದಲ್ಲಿರುವ ಬ್ಯಾಂಕ್ ಸರ್ಕಲ್ ಬಳಿ ಬೆಳಕಿಗೆ ಬಂದಿದೆ.
ಬಾಶೆಟ್ಟಿಹಳ್ಳಿ – ಮಾರಸಂದ್ರ ನಡುವಿನ ರೆಜಾನಾನ್ಸ್ ಲ್ಯಾಬೋರೇಟರಿಸ್‌ಗೆ ಸೇರಿದ ನಿರ್ಜನ ಪ್ರದೇಶದಲ್ಲಿ ಇಂದು ಸ್ವಚ್ಚತಾ ಕಾರ್ಯ ನೆರವೇರಿಸುವಾಗ, ಹೊಂಗೆ ಮರದ ಕೆಳಗೆ ವ್ಯಕ್ತಿಯೋರ್ವನ ಅಸ್ಥಿಪಂಜರದ ಬಿಡಿಭಾಗಗಳು ದೊರೆತಿದ್ದು, ಮರವನ್ನು ನೋಡಿದ ಸ್ವಚ್ಚತಾ ಸಿಬ್ಬಂದಿಗಳಿಗೆ ಮರದಲ್ಲಿ ವ್ಯಕ್ತಿಯೋರ್ವನ ತಲೆ ಬುರುಡೆ ನೇಣುಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿರುವುದು ಕಂಡು ಬಂದಿದೆ.
ಕೂಡಲೇ ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಆರಂಭಿಸಿದರು.
ಹಲವು ಗಂಟೆಗಳ ತನಿಖೆ ಬಳಿಕ, ಸುಮಾರು 6 ತಿಂಗಳ ಹಿಂದೆ ಇದೇ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾದ ಕೊರಟಗೆರೆ ಮೂಲದ ದೇವರಾಜ್ ಎನ್ನುವವರ ಅಸ್ಥಿಪಂಜರ ಎಂದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನು ಕೊರಟಗೆರೆ ಮೂಲದವನಾಗಿದ್ದು, ಕೋಳೂರಿನಲ್ಲಿ ವಾಸವಿದ್ದ ಎನ್ನಲಾಗಿದೆ.
ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಅಸಹಜ ಸಾವು ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.