ಬೆಂಗಳೂರು: ರಾಜ್ಯದಲ್ಲಿ ತಾಪಮಾನ ಹೆಚ್ಚಾಗಿದ್ದು, ಮೇ ತಿಂಗಳವರೆಗೆ ರಾಜ್ಯದಲ್ಲಿ ಬಿಸಿಲಿನ ಬೇಗೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ನೆಚ್ಚರಿಕೆ ನೀಡಿದೆ.
ಮಾರ್ಚ್ 2026ರಿಂದ ಮೇ ಅವಧಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಲಿದ್ದು, ಕೇರಳ ಮತ್ತು ತಮಿಳುನಾಡು ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ವಾಡಿಕೆಗಿಂತಲೂ ಬಿಸಲು ಹೆಚ್ಚಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡು ಕರ್ನಾಟಕದ ಬಹುತೇಕ ಭಾಗಗಳಿಗೆ ಮಾರ್ಚ್ -ಮೇ ಅವಧಿಯಲ್ಲಿ ಉಷ್ಣ ಅಲೆ ತೀವ್ರಗೊಳ್ಳುವ ಸಾಧ್ಯತೆಯಿದ್ದು, ರೆಡ್ ಅಲರ್ಟ್ ಘೋಷಿಸಿದೆ.
ಪ್ರಸ್ತುತ ಹೆಚ್ಚಾಗಿರುವ ತಾಪಮಾನವು 3 ರಿಂದ 6 ದಿನಗಳವರೆಗೆ ಮುಂದುವರಿ ಯುವ ಸಾಧ್ಯತೆ ಇದ್ದು, ನಂತರ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.
ಈ ನಡುವೆ ಕರಾವಳಿ ಮತ್ತು ಉತ್ತರ ಒಳನಾಡು ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವೂ ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ.
ಮಾರ್ಚ್ ನಿಂದ ಮೇವರೆಗೆ ಸಂಪೂರ್ಣ ಕರ್ನಾಟಕದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚು. ಇರುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕದಲ್ಲಿ ಗರಿಷ್ಠ ತಾಪಮಾನ ಶೇ.65 ರಿಂದ 75 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಹವಾಮಾನ ತಜ್ಞರು ಫೆಬ್ರವರಿಯಲ್ಲೇ ಉಷ್ಣತೆ ಏರಿಕೆಯಾಗುತ್ತಿರುವುದನ್ನು ಗಮನಿಸಿದ್ದು, ಮುಂದಿನ ತಿಂಗಳುಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನಾಗರಿಕರು ಈ ಅವಧಿಯಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ಸಲಹೆ ನೀಡಿದೆ.