ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದ ಬಿಜೆಪಿ (BJP), ಅದರ ಶಾಸಕನೇ ಕಮಿಷನ್ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವುದು ತೀವ್ರ ಮುಜುಗರಕ್ಕೆ ಎದುರಿಸುವಂತಾಗಿದೆ.
ಹೌದು ರಾಜ್ಯದಲ್ಲಿ ಇನ್ನೊಂದು ಲಂಚ ಪ್ರಕರಣ ಭಾರೀ ಸದ್ದು ಮಾಡಿದೆ. ಕಾಮಗಾರಿ ಗುತ್ತಿಗೆ ನೀಡಲು 5 ಲಕ್ಷ ರು ಅಡ್ವಾನ್ಸ್. ಲಂಚ ಸ್ವೀಕರಿಸುವಾಗ ಶಿರಹಟ್ಟಿಯ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಸೇರಿ ಮೂವರು ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಾಸಕ ಚಂದ್ರು ಲಮಾಣಿಗೆ ಸೇರಿದ ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆ ಮೇಲೆ ಧಾರವಾಡ ಲೋಕಾ ಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಶಾಸಕ ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಕಾರ್ಯದರ್ಶಿಗಳು ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.
ಬಳಿಕ ಕಂತೆಕಂತೆ ಹಣದ ಸಮೇತ ಶಾಸಕ ಚಂದ್ರು ಲಮಾಣಿ, ಅವರ ಸರ್ಕಾರಿ ಕಾರ್ಯದರ್ಶಿ ಮಂಜುನಾಥ ವಾಲ್ಮೀಕಿ ಹಾಗೂ ಖಾಸಗಿ ಕಾರ್ಯ ದರ್ಶಿ ಗುರುನಾಯ್ಕರನ್ನು ಲೋಕಾಯುಕ್ತರು ಬಂಧಿಸಿದ್ದಾರೆ. ಇದು ಬಿಜೆಪಿ ವಲಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ದನಿ ಎತ್ತಲಾಗದಂತೆ, ಸಮರ್ಥನೆ ಮಾಡಿಕೊಳ್ಳಲಾಗದ ಸ್ಥಿತಿಗೆ ಬಂದಿದೆ.
ಈ ಕುರಿತಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ತಿಳಿಸಿದರು.
ಅವರು ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿಯವರು ಲಂಚದ ಆರೋಪದ ಮೇಲೆ ಲೋಕಾಯುಕ್ತರ ಬಳಿ ಸಿಲುಕಿರುವ ಬಗ್ಗೆ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡುತ್ತಾ, ಬಿಜೆಪಿಯವರು ಬೇರೆ ಪಕ್ಷದವರ ಮೇಲೆ ಲಂಚದ ಆರೋಪವನ್ನು ಸುಲಭವಾಗಿ ಮಾಡುತ್ತಿದ್ದರು. ಆದರೆ ಈಗ ಬಿಜೆಪಿ ಶಾಸಕರೇ ಲಂಚದ ಆರೋಪದಲ್ಲಿ ಸಿಲುಕಿದ್ದಾರೆ. ಲೋಕಾಯುಕ್ತರ ತನಿಖೆ ನಡೆಯಲಿ ಎಂದು ತಿಳಿಸಿದರು.
ಬಿಜೆಪಿಯವರು ಬಹಳ ಪ್ರಾಮಾಣಿಕರಲ್ಲವೇ: ಡಿಸಿಎಂ ಡಿ.ಕೆ. ಶಿವಕುಮಾರ್ ಲೇವಡಿ
*ಬೆಂಗಳೂರು: ಬಿಜೆಪಿಯವರು ಈ ದೇಶದಲ್ಲೇ ಅತ್ಯಂತ ಪ್ರಾಮಾಣಿಕರಲ್ಲವೇ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಲೇವಡಿ ಮಾಡಿದ್ದಾರೆ.
ಜಿಬಿಎ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ಬಿಜೆಪಿ ಶಾಸಕ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿರುವ ಬಗ್ಗೆ ಕೇಳಿದಾಗ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.
“ಬಿಜೆಪಿಯವರು ಭ್ರಷ್ಟಾಚಾರಿಗಳಾಗಿರುವುದಿಲ್ಲವಲ್ಲವೇ. ನಿಮಗೆ ಯಾರೋ ತಪ್ಪು ಮಾಹಿತಿ ನೀಡಿರಬೇಕು. ಲೋಕಾಯುಕ್ತದವರು ಏನು ಹೇಳುತ್ತಾರೆ ಕಾದು ನೋಡೋಣ. ಆನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ” ಎಂದು ನಯವಾಗಿ ಹರಿಹಾಯ್ದರು.
ಎಐ ಸಮ್ಮೇಳನದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯನ್ನು ದೇಶ ವಿರೋಧಿ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಮ್ಮ ಪಕ್ಷದ ಹಿರಿಯ ನಾಯಕರ ನಿಲುವು ಏನೆಂದು ತಿಳಿದು, ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.