ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈತರು ಡ್ರೋನ್ (Drones) ಹಾರಾಟದಿಂದ ಆತಂಕಕ್ಕೆ ಒಳಗಾಗಿದ್ದರೆ, ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಂತಿರುವ ಲಾರಿಗಳಿಂದ ವಾಹನ ಸವಾರರು ಪರದಾಡುವಂತಾಗಿದೆ.

ಹೌದು ದೊಡ್ಡಬೆಳವಂಗಲ ಸುತ್ತಮುತ್ತ ರಾತ್ರೋರಾತ್ರಿ ಡೋನ್ ಗಳ ಹಾರಾಟ ಕಂಡು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ. ನಾರನಹಳ್ಳಿ, ಸೊನಹಳ್ಳಿ ಗ್ರಾಮಗಳ ವ್ಯಾಪ್ತಿಯ ಸುಮಾರು 2100 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಇದನ್ನ ವಿರೋಧಿಸಿ 5 ಗ್ರಾಮಗಳ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬೆನ್ನಲ್ಲೇ ರಾತ್ರೋರಾತ್ರಿ 8ರಿಂದ 10 ಡ್ರೋನ್ಗಳ ಹಾರಾಟ ಕಂಡುಬಂದಿದ್ದು, ಡ್ರೋನ್ ಬಳಸಿ ಸರ್ವೇ ಕಾರ್ಯ ನಡೆಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರದ್ದಾಗಿದ್ದು, ಯಾರು ಎಲ್ಲಿಂದ ಡೋನ್ ಹಾರಿಸುತ್ತಿದ್ದಾರೆ ಎಂಬುದು ನಿಗೂಢವಾಗಿದೆ.
ರಾತ್ರಿ ವೇಳೆ ಡ್ರೋನ್ಗಳ ಹಾರಾಟ ಕಂಡು ರೈತರು ಆತಂಕಕ್ಕೊಳಗಾಗಿದ್ದಾರೆ.
ಇನ್ನೂ ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಕೆಐಎಡಿಬಿ ಭೂಸ್ವಾದಿನ ವಿರೋಧಿಸಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ಇಂದು ಸಂಜೆ 5:00 ಗಂಟೆಗೆ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿಯ ಮುಂಭಾಗದಲ್ಲಿ ಹೋರಾಟವನ್ನು ಪ್ರಾರಂಭಿಸಲು ಸಮಯವನ್ನು ನಿಗದಿಪಡಿಸಲಾಗಿದೆ.
ಈ ಹೋರಾಟದಲ್ಲಿ ಹಿರಿಯ ನ್ಯಾಯವಾದಿಗಳಾದ ಸಿ.ಎಚ್ ಹನುಮಂತರಾಯ ಅವರು ಸೇರಿದಂತೆ ಮುಖಂಡರುಗಳು ಭಾಗವಹಿಸಲಿದ್ದಾರೆಂದು ದೊಡ್ಡಬಳ್ಳಾಪುರ ತಾಲೂಕುಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಸಿ. ಶಶಿಧರ್ ತಿಳಿಸಿದ್ದಾರೆ.
ಲಾರಿಗಳ ಭಯ
ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಡ್ರೋನ್ ಆತಂಕ ಒಂದೆಡೆಯಾದರೆ, ಇದೇ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಮಂಗಲ ಗೇಟ್ ಬಳಿ ಲಾರಿಗಳು ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಲ್ಲುತ್ತಿರುವುದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಕನ್ನಮಂಗಲ ಗೇಟ್ ಬಳಿಯ ಗೋದಿ ಫ್ಯಾಕ್ಟರಿಗೆಂದು ಬಂದಿವೆ ಎನ್ನಲಾಗುತ್ತಿರುವ ಸುಮಾರು 50ಕ್ಕೂ ಹೆಚ್ಚು ಲಾರಿಗಳು, ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಲ್ಲುತ್ತಿರುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪ ಸ್ಥಳೀಯರದ್ದಾಗಿದೆ.
ರೈತರಿಗೆ ಟ್ರೋನ್ ಆತಂಕ, ವಾಹನ ಸವಾರರಿಗೆ ಲಾರಿಗಳ ಭಯವನ್ನು ನೀಗಿಸುವ ನಿಟ್ಟಿನಲ್ಲಿ ದೊಡ್ಡಬೆಳವಂಗಲ ಠಾಣೆ ಪೊಲೀಸರು ತ್ವರಿತ ಕ್ರಮಕೈಗೊಳ್ಳ ಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.