ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳನ್ನು (Government schools) ಮುಚ್ಚುವ ಅಥವಾ ವಿಲೀನ ಮಾಡುವ ಸರ್ಕಾರದ ಯೋಜನೆ ಖಂಡನೀಯವಾಗಿದ್ದು, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ, ಏಪ್ರಿಲ್ 10 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜನ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಹಳ್ಳಿ-ಹಳ್ಳಿಗಳಿಂದ ಪೋಷಕರು ಹಾಗೂ ವಿದ್ಯಾರ್ಥಿಗಳು ‘ನಮ್ಮೂರ ಶಾಲೆ ಉಳಿಯಲಿ’ ಎಂಬ ಘೋಷಣೆಯೊಂದಿಗೆ ಭಾಗವಹಿಸಲಿದ್ದಾರೆ ಎಂದು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕೆ.ಕಲ್ಯಾಣ್ ಕುಮಾರ್ ತಿಳಿಸಿದ್ದಾರೆ.

ನಗರದ ಕನ್ನಡ ಜಾಗೃತ ಭವನದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ರಾಜ್ಯ ಮಟ್ಟದ ಬೃಹತ್ ಸಮಾವೇಶದ ಅಂಗವಾಗಿ ವಿವಿಧ ಕನ್ನಡಪರ, ಪ್ರಗತಿಪರ ಸಂಘಟನೆಗಳು, ಸರ್ಕಾರಿ ಶಾಲಾ ಮಕ್ಕಳು-ಪೋಷಕರು, ಹಾಗೂ ವಿದ್ಯಾರ್ಥಿ ಸಂಘಟನೆಯ ಸದಸ್ಯರನ್ನು ಒಳಗೊಂಡ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಾಡಿನ ಜನತೆಯ ತೀವ್ರ ವಿರೋಧದ ನಡುವೆಯೂ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಲಸವನ್ನು ಮುಂದುವರಿಸಿದೆ. ಸರ್ಕಾರವು ಈಗಾಗಲೇ ಯಾವ ಯಾವ ಶಾಲೆಗಳನ್ನು ವಿಲೀನಗೊಳಿಸಬೇಕೆಂದು ಮ್ಯಾಪಿಂಗ್ ನಡೆಸಿದೆ. ಅಧಿಕಾರಿಗಳಿಂದ ಮ್ಯಾಗ್ನೆಟ್ ಶಾಲೆಯ ಸಮೀಕ್ಷೆ ಮಾಡಿಸಲಾಗುತ್ತಿದೆ. ವಿಲೀನಗೊಳ್ಳುವ ಶಾಲೆಗಳ ಮುಖ್ಯಶಿಕ್ಷಕರಿಗೆ ಮೌಖಿಕವಾಗಿ ಆದೇಶ ನೀಡಲಾಗಿದೆ.
ಏಪ್ರಿಲ್ 8 ಮತ್ತು 9 ರಂದು ನಡೆಯಲಿರುವ ಪೋಷಕರ ಸಭೆಗಳಲ್ಲಿ , ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮಕ್ಕಳನ್ನು ಕೆಪಿಎಸ್ ಶಾಲೆಗೆ ಕಳುಹಿಸುವಂತೆ ಒತ್ತಾಯಿಸಲು ಶಾಲೆಗಳಿಗೆ ನೊಟೀಸ್ ನೀಡಲಾಗಿದೆ. ಈ ಯೋಜನೆಯನ್ನು ಶತಾಯಗತಾಯ ಅನುಷ್ಠಾನಗೊಳಿಸಲು ಏಪ್ರಿಲ್ ಒಂದರಂದು ಜಿಲ್ಲೆಯ ಡಿಡಿಪಿಐ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆಯನ್ನು ನಡೆಸಿ ಶಾಲೆ ಮುಚ್ಚಲು ಕುತಂತ್ರ ನಡೆಸಿದೆ.
ದೊಡ್ಡಬಳ್ಳಾಪುರದ ಕಚೇರಿಪಾಳ್ಯ, ಅರಳು ಮಲ್ಲಿಗೆ, ಮಾರ್ಕೆಟ್ ಚೌಕ, ನೇಗೆಯವರ ಬೀದಿ, ಜಿಜಿಎಂಎಸ್, ಜಿಯುಎಂಎಸ್, ಇಸ್ಲಾಂಪುರ, ಎಲೆಪೇಟೆ, ಖಾಸ್ಬಾಗ್ ಸೇರಿದಂತೆ ಇನ್ನೂ ಹಲವಾರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಈ ಪ್ರಕ್ರಿಯೆ ಶುರುವಾಗಿದೆ.
ಈ ಎಲ್ಲಾ ಶಾಲೆಗಳನ್ನು ಮುಚ್ಚಿ ದೂರದಲ್ಲಿರುವ ರೋಜಿಪುರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಮಕ್ಕಳನ್ನು ಕುಳುಹಿಸುವ ಸಿದ್ಧತೆ ನಡೆದಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಪಠ್ಯಕ್ರಮ ಈಗಾಗಲೇ ರೂಪು ಗೊಂಡಿದೆ. ಇದು ಖಾಸಗಿ ಶಾಲೆಗಳಲ್ಲಿ ಮಕ್ಕಳು ಕಲಿಯುವ ಪಠ್ಯಕ್ರಮಕ್ಕಿಂತ ವಿಭಿನ್ನವಾಗಿರುತ್ತದೆ. ಇಲ್ಲಿ ಮಕ್ಕಳಿಗೆ ಬರೀ ಕೌಶಲ್ಯಗಳನ್ನು ಕಲಿಸಿ ಅವರನ್ನು ನುರಿತ ಕಾರ್ಮಿಕರನ್ನಾಗಿ ತಯಾರು ಮಾಡಲಾಗುತ್ತದೆ.
ರೈತ ಕಾರ್ಮಿಕರ ಮಕ್ಕಳಿಗೆ ಸಮಗ್ರ ಜ್ಞಾನ ನೀಡುವ ಗುಣಮಟ್ಟದ ಶಿಕ್ಷಣ ನೀಡುವುದಿಲ್ಲ. ಸರ್ಕಾರದ ಈ ಕಡು ಜನವಿರೋಧಿ ಮತ್ತು ನಿರಂಕುಶ ನಡೆಯ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಎಐಡಿಎಸ್ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ರಾಜ್ಯಮಟ್ಟದ ಜನ ಸಮಾವೇಶವನ್ನು ಏಪ್ರಿಲ್ 10 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜಿಸಲಾಗಿದೆ.
ರಾಜ್ಯದ ಹಳ್ಳಿ-ಹಳ್ಳಿಗಳಿಂದ ಪೋಷಕರು ಹಾಗೂ ವಿದ್ಯಾರ್ಥಿಗಳು ‘ನಮ್ಮೂರ ಶಾಲೆ ಉಳಿಯಲಿ’ ಎಂಬ ಘೋಷಗಳನ್ನು ಮೊಳಗಿಸುತ್ತ ಸಹಸ್ರ ಸಂಖ್ಯೆಯಲ್ಲಿ ಬೆಂಗಳೂರಿಗೆ ಬರಲು ತಯಾರಿ ನಡೆಸಿದ್ದು, ನಾಡಿನ ಹಿರಿಯ ಸಾಹಿತಿಗಳಾದ ಡಾ. ಹಂಪ ನಾಗರಾಜಯ್ಯ, ಡಾ. ಕೆ.ಮರುಳಸಿದ್ದಪ್ಪ, ಪ್ರೊ ಎಸ್ ಜಿ ಸಿದ್ದರಾಮಯ್ಯ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯಾಧ್ಯಕ್ಷ ಡಾ. ಅಲ್ಲಮಪ್ರಭು ಬೆಟ್ಟದೂರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಎ ಮುರಿಗೆಪ್ಪ, ಹಿರಿಯ ಹೋರಾಟಗಾರರಾದ ರಾಘವೇಂದ್ರ ಕುಷ್ಟಗಿ, ಹಿರಿಯ ನ್ಯಾಯವಾದಿಗಳಾದ ಹೇಮಲತಾ ಮಹಿಷಿ, ಶಿಕ್ಷಣ ತಜ್ಞರಾದ ನಿರಂಜನರಾಧ್ಯ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. ಎಲ್ಲಾ ಕನ್ನಡಪರ ಮನಸ್ಸುಗಳು ಭಾಗವಹಿಸಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಐಡಿಎಸ್ಓ ಬೆಂಗಳೂರು ಜಿಲ್ಲಾ ಸದಸ್ಯೆ ತುಳಸಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದರ ವಿರುದ್ದ ಕಳೆದ 4 ತಿಂಗಳಿನಿಂದ ಜನ ಹೋರಾಟ ನಡೆದಿದೆ. ಎಐಡಿಎಸ್ಓ ನೇತೃತ್ವದಲ್ಲಿ ರಾಜ್ಯದಾದ್ಯಂತ ಹಳ್ಳಿ-ಹಳ್ಳಿಗಳಲ್ಲಿ ಪೋಷಕರು ಹಾಗೂ ಗ್ರಾಮಸ್ಥರು ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಗಳನ್ನು ರಚಿಸಿಕೊಂಡು ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಒಕ್ಕೊರಲಿನಿಂದ ಧ್ವನಿಯೆತ್ತಿದ್ದಾರೆ.
ನಾಡಿನ ಹೆಸರಾಂತ ಸಾಹಿತಿಗಳು, ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಪ್ರೇಮಿಗಳು ಬಡಮಕ್ಕಳನ್ನು ಶಿಕ್ಷಣದಿಂದ ಶಾಶ್ವತವಾಗಿ ದೂರ ತಳ್ಳುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ.
ದೊಡ್ಡಬಳ್ಳಾಪುರವೂ ಇದಕ್ಕೆ ಹೊರತಾಗಿಲ್ಲ. ಇಲ್ಲಿನ ಹಲವು ಪ್ರಗತಿಪರ ಜನರು ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರು ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಏಪ್ರಿಲ್ 10 ರ ಸಮಾವೇಶಕ್ಕೆ ಬರಲು ಸಿದ್ದರಾಗಿದ್ದಾರೆ ಎಂದು ತಿಳಿಸಿದರು.
ಸಾಹಿತಿ ಡಾ.ಎ.ಓ.ಆವಲಮೂರ್ತಿ ಮಾತನಾಡಿ, ಇದು ಸರ್ಕಾರಿ ಶಾಲೆಗಳನ್ನು ಉಳಿಸುವುದರ ಜೊತೆಗೆ ಬಲಪಡಿಸಲು ದಾರಿಯಾಗಬೇಕು. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಲು ಮೊಟ್ಟ ಮೊದಲಿಗೆ ಕಾಲಿ ಇರುವ ಎಲ್ಲಾ ಶಿಕ್ಷಕರ ಹುದ್ದೆಯನ್ನು ಖಾಯಂ ಶಿಕ್ಷಕರಿಂದ ಭರ್ತಿ ಮಾಡಬೇಕು. ಕರ್ನಾಟಕ ಸರ್ಕಾರ ಈ ಮೇಲಿನ ವಿಷಯಕ್ಕೆ ಗಮನ ಹರಿಸ ಬೇಕು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಕೈಬಿಡಬೇಕು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಕನ್ನಡಪರ ಸಂಘಟನೆ, ರೈತ ಸಂಘಟನೆ, ಮಹಿಳಾ ಮತ್ತು ಯುವಜನ ಸಂಘಟನೆಯ ಮುಖಂಡರು, ಕನ್ನಡ ಹಾಗೂ ಇನ್ನಿತರೆ ಮಾತೃಭಾಷಾ ಮಾಧ್ಯಮವನ್ನು ಸಂಪೂರ್ಣವಾಗಿ ಕಡೆಗಣಿಸಿ ಕೇವಲ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವ ಬಡಜನ ವಿರೋಧಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ತೀವ್ರವಾಗಿ ಖಂಡಿಸಿದರು. ಹಾಗೂ ಏಪ್ರಿಲ್ 10 ರಂದು ನಡೆಯುತ್ತಿರುವ ಬೃಹತ್ ಜನಸಮಾವೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲು ನಿರ್ಧರಿಸಿದರು.
ಸಭೆಯಲ್ಲಿ ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡಪರ ಹೋರಾಟಗಾರರಾದ ಸಂಜೀವ್ ನಾಯಕ್, ಜಿ.ಸತ್ಯನಾರಾಯಣ್, ಮುನಿಪಾಪಯ್ಯ, ಮುತ್ತೇಗೌಡ ಮೊದಲಾದವರು ಭಾಗವಹಿಸಿದ್ದರು.