ನಂಜನಗೂಡು/ಮೈಸೂರು: ಅನಾರೋಗ್ಯದಿಂದ ಅನೇಕ ದಿನಗಳಿಂದ ಹಾಸಿಗೆ ಹಿಡಿದಿದ್ದ ನಂಜನಗೂಡು ತಾಲೂಕಿನ ಹುಲ್ಲಳ್ಳಿ ಗ್ರಾಮದ ಪೂಜಾ ಎಂಬುವವರ ನಿವಾಸಕ್ಕೆ ಭೇಟಿ ನೀಡಿದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಸಾಂತ್ವನ ಹೇಳಿದರು.

ಪೂಜಾ ಅವರ ಅನಾರೋಗ್ಯದ ಬಗ್ಗೆ ಯುವಕನೊಬ್ಬ ವೀಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿ, ಈ ವಿಡಿಯೋ ಕುಮಾರಸ್ವಾಮಿ ಅವರಿಗೆ ಮುಟ್ಟುವ ತನಕ ಶೇರ್ ಮಾಡಿ ಎಂದು ಸಾರ್ವಜನಿಕರನ್ನು ವಿನಂತಿ ಮಾಡಿದ್ದ. ಈ ವಿಡಿಯೋವನ್ನು ಗಮನಿಸಿದ್ದ ಕೇಂದ್ರ ಸಚಿವರು ಶುಕ್ರವಾರ ಖುದ್ದು ಅವರ ನಿವಾಸಕ್ಕೆ ತೆರಳಿ ಆರೋಗ್ಯದ ಸಮಸ್ಯೆಯನ್ನು ಅಳಿಸಿ ನೆರವಿನ ಹಸ್ತ ಚಾಚಿದರು.
ಸರಿಸುಮಾರು ಮುಕ್ಕಾಲು ಗಂಟೆ ಕಾಲ ಪೂಜಾ, ಅವರ ಪತಿ ರವಿ, ಅವರ ತಂದೆ ಕುಮಾರ, ತಾಯಿ ಶೀಲಾ ಅವರೊಂದಿಗೆ ಚರ್ಚಿಸಿದ ಸಚಿವರು, ಕುಟುಂಬಕ್ಕೆ ಧೈರ್ಯ ಹಾಕಿ ನಿಮ್ಮ ಜತೆ ನಾನಿದ್ದೇನೆ ಎಂದು ತಿಳಿಸಿದರು. ತಮ್ಮ ಮನೆಗೆ ಕುಮಾರಸ್ವಾಮಿ ಬಂದ ಕೂಡಲೇ ಇಡೀ ಕುಟುಂಬ ಕಣ್ಣೀರಾಯಿತು. ಪೂಜಾ ಅವರು ಸಚಿವರನ್ನು ಕಂಡು ತೀವ್ರ ಭಾವೋದ್ವಗಕ್ಕೆ ತುತ್ತಾದರು.
ಅಲ್ಲದೆ, ಕುಟುಂಬದ ಪರಿಸ್ಥಿತಿಯ ಬಗ್ಗೆ ಸ್ಥಳೀಯರು ಹಾಗೂ ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು, ಪಂಚಾಯತ್ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದರಲ್ಲದೆ, ಪೂಜಾ ಅವರ ಆರೋಗ್ಯದ ಬಗ್ಗೆ ಅವರ ಪೋಷಕರಿಂದ ವಿವರ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಸಚಿವರು ಪೂಜಾ ಅವರ ಸಂಕಷ್ಟದ ಬಗ್ಗೆ ವಿಡಿಯೋ ಮಾಡಿ ಶೇರ್ ಮಾಡಿದ್ದ ಯುವಕ ಚೇತನ್ ಅವರನ್ನು ಶ್ಲಾಘಿಸಿದ ಕೇಂದ್ರ ಸಚಿವರು, ತನ್ನ ವಿಡಿಯೋ ನೋಡಿ ಪೂಜಾ ಅವರ ಮನೆಗೆ ಬಂದ ಸಚಿವರಿಗೆ ಆತ ಧನ್ಯವಾದ ಸಲ್ಲಿಸಿದರು.
ಪೂಜಾ ಅವರು ಬೆನ್ನಿನ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ತದ ನಂತರ ಆ ಚಿಕಿತ್ಸೆಯ ಅಡ್ಡ ಪರಿಣಾಮವಾಗಿ ಅವರ ಎರಡು ಕಾಲುಗಳು ಸಮಸ್ಯೆಗೆ ತುತ್ತಾಗಿವೆ. ಮೊದಲು ಅವರ ಒಂದು ಕಾಲಿಗೆ ಆಪರೇಷನ್ ಆಗಿತ್ತು. ಅದು ಸರಿ ಹೋಗಲಿಲ್ಲ, ಈಗ ಮತ್ತೊಂದು ಕಾಲಿಗೆ ಆಪರೇಷನ್ ಆಗಿದೆ. ಹಲವಾರು ತಿಂಗಳಿನಿಂದ ಪೂಜಾ ಅವರು ಹಾಸಿಗೆ ಹಿಡಿದಿದ್ದಾರೆ. ಅವರಿಗೆ ನಡೆಯಲು, ಎದ್ದು ಓಡಾಡಲು ಸಾಧ್ಯವಿಲ್ಲ. ಕುಟುಂಬ ತೀವ್ರ ಆರ್ಥಿಕ ಕಷ್ಟದಿಂದ ಬಳಲುತ್ತಿದೆ. ಈಗಾಗಲೇ ಹಲವು ಶಸ್ತ್ರಚಿಕಿತ್ಸೆಗಳು ನಡೆದಿದ್ದರೂ ಪೂಜಾ ಅವರಿಗೆ ಗುಣಮುಖ ಆಗಿಲ್ಲ. ಹುಲ್ಲಳ್ಳಿ ಗ್ರಾಮದಲ್ಲಿ ಸ್ವಂತ ಸೂರು ಇಲ್ಲದೆ ಕಷ್ಟಪಡುತ್ತಿರುವ ಕುಟುಂಬದ ಸ್ಥಳೀಯರು ಸಚಿವರಿಗೆ ಮಾಹಿತಿ ನೀಡಿದರು.
ಅಲ್ಲದೆ, ಮಗಳಿಗೆ ಚಿಕಿತ್ಸೆ ಕೊಡಿಸಲು ಸ್ವಂತ ಮನೆಯನ್ನು ಮತ್ತು ಇದ್ದ ಅಲ್ಪಸ್ವಲ್ಪ ಭೂಮಿಯನ್ನು ತಂದೆ ಮಾಡಿಕೊಂಡಿದ್ದಾರೆ. ಈಗ ವಾಸ ಇರುವ ಬಾಡಿಗೆ ಮನೆಗೆ ಬಾಡಿಗೆಯನ್ನು ಕಟ್ಟಲಾಗದೇ ಕುಟುಂಬ ಕಷ್ಟದಲ್ಲಿದೆ. ಅಲ್ಲದೆ, ಪತಿ ರವಿ ಕೂಡ ಕೆಎಸ್ಆರ್ಟಿಸಿ ಬಸ್ ಅಪಘಾತದಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ. ಅವರಿಗೂ ದುಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. ಅವರ ಮನವಿಗೆ ಮರುಗಿದ ಸಚಿವರು, ಸ್ಥಳದಲ್ಲಿಯೇ ಚಿಕಿತ್ಸೆಗೆ ಧನಸಹಾಯ ಮಾಡಿದರು.
ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ
ಪೂಜಾ ಕುಟುಂಬಕ್ಕೆ ಗ್ರಾಮದಲ್ಲಿ ವಾಸಕ್ಕೆ ಸ್ವಂತ ಮನೆ ಇರುವುದಿಲ್ಲ. ಈ ಹಿನ್ನೆಯಲ್ಲಿ ಲೀಸಿಗೆ ಮನೆ ಕುಡಿಸುವುದಾಗಿ ಕುಟುಂಬಕ್ಕೆ ಸಚಿವರು ಭರವಸೆ ನೀಡಿದರು.
ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಮನೆಯ ವ್ಯವಸ್ಥೆ ಮಾಡಲು ಪ್ರಯತ್ನಿಸುವುದಾಗಿ ಭರವಸೆ ಕೊಟ್ಟ ಕೇಂದ್ರ ಸಚಿವರು, ಸ್ಥಳದಲ್ಲಿ ಇದ್ದ ಶಾಸಕ ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಶಾಸಕ ಮಹದೇವ್ ಮತ್ತು ಅಶ್ವಿನ್ ಅವರಿಗೆ ಜವಾಬ್ದಾರಿ ವಹಿಸಿದರು. ನಂಜನಗೂಡಿನ ಸ್ಥಳೀಯ ಮುಖಂಡರಿಗೆ ಕಾಲಕಾಲಕ್ಕೆ ಕುಟುಂಬದ ಬಗ್ಗೆ ಅವರ ಆಗುಹೋಗುಗಳ ಬಗ್ಗೆ ಮಾಹಿತಿ ಕೊಡಬೇಕೆಂದು ಸೂಚನೆ ಅವರು ಸೂಚನೆ ನೀಡಿದರು.
ಸಣ್ಣ ಎಂಚಿನ ಮನೆಯಲ್ಲಿ ವಾಸವಿರುವ ಕುಟುಂಬವು ಮಾಸಿಕ ₹3000 ಬಾಡಿಗೆ ಪಾವತಿಸುತ್ತದೆ. ಕೆಲವೊಮ್ಮೆ ಬಾಡಿಗೆ ಹಣ ಕಟ್ಟಲಿಕ್ಕೂ ಅವರು ಕಷ್ಟಪಡುತ್ತೇವೆ. ಮನೆಯ ಮಾಲೀಕ ಮನೆ ಖಾಲಿ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಅಲವತ್ತುಕೊಂಡಿತು ಕುಟುಂಬ.
ಇದೇ ವೇಳೆ ಪಾಂಡವಪುರದಲ್ಲಿ ನೆಲೆಸಿರುವ ಮನೆಯ ಮಾಲೀಕನಿಗೆ ಮೊಬೈಲ್ ಕರೆ ಮಾಡಿ ಮಾತನಾಡಿದ ಸಚಿವರು, ಮಾನವೀಯ ದೃಷ್ಟಿಯಿಂದ ಈ ಕುಟುಂಬಕ್ಕೆ ಸ್ವಲ್ಪ ದಿನ ಕಾಲಾವಕಾಶ ಕೊಡಿ. ಕೊನೆಪಕ್ಷ ಎರಡು ಮೂರು ವರ್ಷ ಲೀಸಿಗೆ ಮನೆ ಕೊಡಿ ಎಂದು ಕೋರಿದರು. ಅಲ್ಲದೆ, ಲೀಜಿನ ಮೊತ್ತವನ್ನು ಸ್ವತಹ ನಾನೇ ತುಂಬಿ ಕೊಡುವೆ ಎಂದು ಮನೆ ಮಾಲೀಕನಿಗೆ ತಿಳಿಸಿದರು. ಆದರೆ ಮನೆ ಮಾರುತ್ತಿರುವುದಾಗಿ ಮನೆ ಮಾಲೀಕ ಸಚಿವರಿಗೆ ತಿಳಿಸಿದರು.
ಅಂತಿಮವಾಗಿ ಪರ್ಯಾಯ ವ್ಯವಸ್ಥೆ ಮಾಡಲು ಮುಖಂಡರಿಗೆ ಸೂಚಿಸಿ ತಮಗೆ ಅಪ್ಡೇಟ್ ಮಾಡುವಂತೆ ಹೇಳಿದ ಸಚಿವರು, ಇವರ ಪರಿಸ್ಥಿತಿಯ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಸಿಇಓ ಅವರೊಂದಿಗೆ ಕೂಡ ಚರ್ಚೆ ನಡೆಸುವ ಭರವಸೆ ನೀಡಿದರು.
ಪೂಜಾ ಅವರ ಪತಿ ಆರೋಗ್ಯವೂ ಸರಿಯಿಲ್ಲ
ತಮ್ಮ ಮಗಳ ಅನಾರೋಗ್ಯದ ಬಗ್ಗೆ ಸಚಿವರ ಬಳಿ ಹೇಳಿಕೊಂಡು ಕಣ್ಣೀರಿಟ್ಟ ತಂದೆ ತಾಯಿ, ಅಳಿಯನ ಆರೋಗ್ಯದ ಪರಿಸ್ಥಿತಿಯ ಬಗ್ಗೆ ಕೂಡ ದುಃಖ ತೋಡಿಕೊಂಡ ಕುಟುಂಬವು, ಅಳಿಯನಿಗೆ ಆಕ್ಸಿಡೆಂಟಾಗಿ ಬಹಳ ದಿನವಾಗಿದೆ, ವರ್ಷಗಳೇ ಕಳೆದರು ಈವರೆಗೂ ನ್ಯಾಯಾಲಯದಲ್ಲಿ ವಿಚಾರಣೆಗೆ ಕರೆದಿಲ್ಲ ಎಂದು ದುಃಖ ತೋಡಿಕೊಂಡರು. ತಕ್ಷಣವೇ ಸಂಬಂಧಪಟ್ಟ ವಕೀಲರ ಜೊತೆ ಮಾತನಾಡಿದ ಸಚಿವರು, ಸಂತ್ರಸ್ತ ಕುಟುಂಬಕ್ಕೆ ನೆರವಾಗುವಂತೆ ಕೋರಿದರು. ಬಳಿಕ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ ಮಾತನಾಡಿದ ಅವರು, ಕುಟುಂಬ ಕೇಸ್ ವಾಪಸ್ ತೆಗೆದುಕೊಳ್ಳುತ್ತದೆ. ಕೂಡಲೆ ತಮ್ಮಲ್ಲಿಗೆ ಕರೆಸಿ ಕುಟುಂಬಕ್ಕೆ ಪರಿಹಾರದ ವ್ಯವಸ್ಥೆ ಮಾಡಿಕೊಡಿ ಎಂದು ಸೂಚಿಸಿದರು.
ಸಚಿವರ ಮಾತಿಗೆ ಸಮ್ಮತಿಸಿ ಆದಷ್ಟು ಬೇಗ ಕುಟುಂಬಕ್ಕೆ ನೆರವಾಗುವುದಾಗಿ ಭರವಸೆ ಕೊಟ್ಟ ಕೆಎಸ್ ಆರ್ ಟಿಸಿ ಎಂಡಿ, ಲೋಕ ಅದಾಲತ್ ನಲ್ಲಿಯೇ ಪ್ರಕರಣಕ್ಕೆ ಮುಕ್ತಾಯ ಕಾಣಿಸಿ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಹೇಳಿದರು.
ಸ್ಥಳದಲ್ಲಿ ಹಾಜರಿದ್ದ ತಹಸಿಲ್ದಾರ್ ಗೆ ಸೂಚನೆ ಕೊಟ್ಟ ಸಚಿವರು, ಕುಟುಂಬಕ್ಕೆ ಜೀವನಕ್ಕಾಗಿ ಒಂದು ಅಂಗಡಿಯನ್ನು ಹಾಕಿಕೊಡುವ ವ್ಯವಸ್ಥೆ ಮಾಡುವಂತೆ ಹೇಳಿದರು. ಅಲ್ಲದೆ, ಮೈಸೂರಿನಲ್ಲಿ ಪೂಜಾ ಮತ್ತು ಅವರು ಪತಿ ರವಿ ಅವರಿಗೆ ಚಿಕಿತ್ಸೆ ಕೊಡಿಸಲು ಪಕ್ಷದ ಮುಖಂಡರಿಗೆ ಸೂಚಿಸಿ ವ್ಯವಸ್ಥೆ ಮಾಡಿದರು ಸಚಿವರು.
ಸಚಿವರ ಸೂಚನೆ ಮೇರೆಗೆ ಪೂಜಾ ಅವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದಾಗಿ ವಿಧಾನ ಪರಿಷತ್ ಸದಸ್ಯಎಸ್ ಎನ್ ಮಂಜೇಗೌಡ ಭರವಸೆ ನೀಡಿದರು. ಹುಣಸೂರು ಶಾಸಕ ಹರೀಶ್ ಗೌಡ ವಿಧಾನಸಭಾ ಸದಸ್ಯ ಸಿಎನ್ ಮಂಜೇಗೌಡ ಮಾಜಿ ಶಾಸಕರಾದ ಮಹದೇವು ಅಶ್ವಿನ್ ಕುಮಾರ್ ಸೇರಿದಂತೆ ಜೆಡಿಎಸ್ ಪಕ್ಷದ ಅನೇಕ ನಾಯಕರು ಹಾಜರಿದ್ದರು.
ಚಾಮುಂಡಿ ಬೆಟ್ಟ ಮತ್ತು ನಂಜನಗೂಡಿಗೆ ತೆರಳಿ ಪೂಜೆ ಸಲ್ಲಿಸಿದ ಸಚಿವರು

ಇಂದು ಬೆಳಗ್ಗೆ ಇಂದು ಬೆಳಗ್ಗೆ ಕೆಲಸ ಸಚಿವರು ಕುಟುಂಬ ಸಮೇತವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಯ ದರ್ಶನ ಪಡೆದರು. ತದನಂತರ ನಂಜನಗೂಡಿಗೆ ತೆರಳಿದ ಅವರು ಶ್ರೀ ನಂಜುಂಡೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು.
ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಎರಡು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ಸಚಿವರು, ನಾಡಿಗೆ ಒಳ್ಳೆಯದಾಗಲಿ ಹಾಗೂ ಎಲ್ಲೆಡೆ ಸುಖ ಶಾಂತಿ ನೆಮ್ಮದಿ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಸ್ವಂತ ಪಕ್ಷ ಕಟ್ಟಿ 5 ಕ್ಷೇತ್ರ ಗೆಲ್ಲಿ: ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಚಾಲೆಂಜ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಲ ನಿರ್ದಿಷ್ಟ ಪ್ರಶ್ನೆ, ಸವಾಲುಗಳನ್ನು ಹಾಕಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ನಮ್ಮನ್ನು ಟೀಕಿಸುವ ಮುನ್ನ ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಕೇಳಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ದಿಶಾ ಸಮಿತಿ ಆರಂಭಕ್ಕೂ ಮುನ್ನ ಕೇಂದ್ರ ಸಚಿವರು ಮಾಧ್ಯಮಗಳ ಜೊತೆ ಮಾತನಾಡಿದರು.
ನಿಮ್ಮ ಮಗನನ್ನು ರಾಜಕಾರಣದಲ್ಲಿ ಇಟ್ಟುಕೊಂಡಿರುವ ನಿಮಗೆ ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಅಹಿಂದ ನಾಯಕ ಎಂದು ಬೀಗುವ ನೀವು ಕಾಂಗ್ರೆಸ್ ಬಿಟ್ಟು ಸ್ವಂತ ಪಕ್ಷ ಐದು ಸೀಟು ಗೆಲ್ಲುವಿರಾ? ಮೊದಲು ಸಿದ್ದರಾಮಯ್ಯ ಅವರು ಈ ಸವಾಲುಗಳನ್ನು ಸ್ವೀಕರಿಸಲಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡುವುದು ನಿಲ್ಲಿಸಬೇಕು. ಅವರಿಗೆ ಆ ಬಗ್ಗೆ ಮಾತನಾಡುವ ನೈತಿಕತೆ, ಯೋಗ್ಯತೆ ಇಲ್ಲ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ. ಕುಟುಂಬ ರಾಜಕಾರಣ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಎಲ್ಲಿದೆ? ಮಗನಿಗೆ ಆಶ್ರಯ ಕಮಿಟಿ ಸದಸ್ಯತ್ವ ನೀಡಿ ಮಗನನ್ನು ಜಿಲ್ಲೆ ನೋಡಿಕೊಳ್ಳಲು ನಾನು ಬಿಟ್ಟಿಲ್ಲ. ನಾನು ಸಿಎಂ ಆಗಿದ್ದಾಗ ನನ್ನ ಮಗನಿಗೆ ಆಶ್ರಯ ಸಮಿತಿ ಸದಸ್ಯನನ್ನಾಗಿ ಮಾಡಿ ಯಾವುದಾದರೂ ಜಿಲ್ಲೆ ನೋಡಿಕೊ ಅಥವಾ ವಸೂಲಿ ಮಾಡು ಎಂದು ಹೇಳಲಿಲ್ಲ ಎಂದು ಅವರು ಕಿಡಿಕಾರಿದರು.
ಅವರ ಮೊದಲ ಮಗ ನಿಧನದ ಬಳಿಕ ಎರಡನೇ ಮಗನಿಗೆ ಆಶ್ರಯ ಕಮಿಟಿಯಲ್ಲಿ ಸದಸ್ಯ ಎಂದು ಮಾಡಿದ್ದಾರೆ. ಅವರ ಎರಡನೇ ಮಗನನ್ನು ರಾಜಕೀಯಕ್ಕೆ ಯಾಕೆ ಕರೆದುಕೊಂಡು ಬಂದರು? ವಸೂಲಿ ಮಾಡೋಕೆ ಅಲ್ಲವೇ? ವಸೂಲಿ ಮಾಡುವುದಕ್ಕೆ ನಾನು ನನ್ನ ಮಗನನ್ನು ಬಿಟ್ಟಿಲ್ಲ. ಅವರ ಮಗ ಈಗ ಎಲ್ಲಾ ಕಡೆ ವಸೂಲಿ ಮಾಡಿಕೊಂಡು ಕೂತಿದ್ದಾರೆ ಎಂದು ಕೇಂದ್ರ ಸಚಿವರು ಹರಿಹಾಯ್ದರು.
58 ಸೀಟು ಗೆದ್ದಿದ್ದು ನನ್ನ ಮತ್ತು ದೇವೇಗೌಡರ ಶಮದಿಂದ
ನಾನು ಜನತಾದಳದಲ್ಲಿದ್ದಾಗ ಆ ಪಕ್ಷ 58 ಸೀಟು ಗೆದ್ದಿದ್ದು ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಾರೆ. ಆ ಎಲೆಕ್ಷನ್ ನಲ್ಲಿ ಪಕ್ಷ ಅಷ್ಟು ಸೀಟು ಗೆಲ್ಲಲು ದೇವೇಗೌಡರು ಮತ್ತು ನನ್ನ ಪಾತ್ರವೂ ಸಾಕಷ್ಟಿದೆ. ಇವರ ಪಾತ್ರ ಕೇವಲ ಹತ್ತರಷ್ಟು ಮಾತ್ರ.1999ರಲ್ಲಿ ಉಡ ಇವರೇ ಪಕ್ಷದ ಅಧ್ಯಕ್ಷರಾಗಿದ್ದರು. ಆಗ ಎಷ್ಟು ಸೀಟು ಗೆದ್ದಿದ್ದರು? ಮಹಾದೇವಪ್ಪ, ಸಿದ್ದರಾಮಯ್ಯ ಇಬ್ಬರು ಮನೆಗೆ ಬಂದು ದೇವೇಗೌಡರ ಮುಂದೆ ಕಣ್ಣೀರು ಹಾಕಿದ್ದರು. ಬಹುಶಃ ಆಗ ದೇವೇಗೌಡರ ಮುಂದೆ ಬಕೆಟ್ ಇದ್ದಿದ್ದರೆ ತುಂಬುತಿತ್ತು. ಸ್ವಲ್ಪ ಹಳೆ ವಿಚಾರಗಳನ್ನ ಸಿದ್ದರಾಮಯ್ಯ ನೆನಪು ಮಾಡಿಕೊಂಡರೆ ಉತ್ತಮ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ಸೋಲು ಗೆಲುವು ಸಹಜ. 1999ರ ಚುನಾವಣೆಯಲ್ಲಿ ಸ್ವತಃ ನಾನು, ದೇವೇಗೌಡರು, ರೇವಣ್ಣ, ಮಹಾದೇವಪ್ಪ, ಸಿದ್ದರಾಮಯ್ಯ ಎಲ್ಲರೂ ಸೋತಿದ್ದೆವು. ಆದರೆ ರಾಜಕೀಯ ಬೇಡ ಎಂದು ನಾನಾಗಲಿ ದೇವೇಗೌಡರಾಗಲಿ ಎಂದು ಕಣ್ಣೀರು ಹಾಕಿದವರಲ್ಲ. ಆದರೆ ಸಿದ್ದರಾಮಯ್ಯ ಕಣ್ಣೀರು ಹಾಕಿದ್ದರು. ಅಂದು ದೇವೇಗೌಡರು ಒಂದೇ ಮಾತು ಹೇಳಿದರು, ಹೆದರುವ ಅವಶ್ಯಕತೆ ಇಲ್ಲ ಪಕ್ಷ ಕಟ್ಟೋಣ ನಡೆಯಿರಿ. ನಾನಿದ್ದೇನೆ ಎಂದು ಧೈರ್ಯ ಹೇಳಿದ್ದರು ಎಂದು ಆಂಜನೇಯ ಪರಿಸ್ಥಿತಿಯನ್ನು ನೆನಪು ಮಾಡಿಕೊಂಡರು ಕುಮಾರಸ್ವಾಮಿ ಅವರು.
ಅಹಿಂದ ಹೆಸರಿನಲ್ಲಿ ಪಕ್ಷಕ್ಕೆ ಚೂರಿ ಹಾಕಿದರು
2004ರಲ್ಲಿ ಮಂಡ್ಯ, ರಾಮನಗರ ಎಲ್ಲೂ ಕೂಡ ಸಿದ್ದರಾಮಯ್ಯ ಪ್ರಚಾರಕ್ಕೆ ಬಂದಿಲ್ಲ. ನಾವು ಕೂಡ ಅವರನ್ನು ಕರೆಯಲಿಲ್ಲ. ಅಹಿಂದ ರಚಿಸಿ ದೇವೇಗೌಡರಿಗೆ ಅನ್ಯಾಯ ಮಾಡಿದರು. ಪಕ್ಷದ ಬೆನ್ನಿಗೆ ಚೂರಿ ಹಾಕಿದರು. 2006ರಲ್ಲಿ 200 ಮತಗಳಲ್ಲಿ ಗೆದ್ದಾಗ ಅವರ ಪರಿಸ್ಥಿತಿ ಹೇಗಿತ್ತು ಎಂದು ನೆನಪಿಸಿಕೊಳ್ಳಿ? ಈಗ ಅಧಿಕಾರ ಇದೆ ಎಂದು ಹಳೆಯದನ್ನು ಮರೆತರೆ ಜನ ಕ್ಷಮಿಸುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಯಾಕೆ ಸೋತರು? ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಸಚಿವರು ಟೀಕಿಸಿದರು.
ಅಹಿಂದಾ ಚಾಂಪಿಯನ್ ಗೆ ಚಾಲೆಂಜ್
ಸಿದ್ದರಾಮಯ್ಯ ಅವರು ಅಹಿಂದ ಚಾಂಪಿಯನ್ ಎಂದು ಎಲ್ಲರೂ ಹೇಳುತ್ತಾರೆ. ಹಾಗಾದ್ರೆ ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೊರಬಂದು ಸ್ವಂತ ಪಕ್ಷ ಕಟ್ಟಿ ಐದು ಕ್ಷೇತ್ರ ಗೆದ್ದು ತೋರಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸವಾಲು ಹಾಕಿದರು.
ಅವರಿಗೆ ಸ್ವಂತ ಪಕ್ಷ ಕಟ್ಟಿ ಸ್ವಂತ ಬಲದ ಮೇಲೆ ಗೆಲ್ಲುವ ಶಕ್ತಿ ಇಲ್ಲ. ಇನ್ನೊಬ್ಬರು ಕಟ್ಟಿರುವ ಪಕ್ಷವನ್ನು ಸೇರಿ 40- 50 ವರ್ಷಗಳಿಂದ ಅಲ್ಲಿ ಕಷ್ಟಪಟ್ಟು ಬೆಳೆದಿರುವ ನಾಯಕರನ್ನು ಮೂಲೆಗುಂಪು ಮಾಡಿ ಇವರು ರಾಜಕೀಯ ಶಕ್ತಿ ಬಳಸಿಕೊಂಡಿದ್ದಾರೆ ಎಂದು ಕುಮಾರಸ್ವಾಮಿಯವರು ಅಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ನಮ್ಮನ್ನು ಬಯ್ಯುತ್ತಾರೆ, ಬೇರೆ ರಾಜ್ಯಗಳಲ್ಲಿ ಅಂಗಲಾಚುತ್ತಾರೆ
ಕಾಂಗ್ರೆಸ್ ಪರಿಸ್ಥಿತಿಯನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಸಿದ್ದರಾಮಯ್ಯ ಅವರು ಆ ಪಕ್ಷಕ್ಕೆ ಕೊನೆ ಮೊಳೆ ಹೊಡೆಯುತ್ತಾರೆ. ಇಲ್ಲಿ ನೋಡಿದರೆ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಆದರೆ, ತಮಿಳುನಾಡಿನಲ್ಲಿ ಕ್ಷೇತ್ರಗಳಿಗಾಗಿ ಡಿಎಂಕೆ ಬಳಿ ಬೇಡಿಕೊಳ್ಳುತ್ತಾರೆ. ರಾಷ್ಟ್ರೀಯ ಪಕ್ಷ ಅಂತಾರೆ, ಬಿಹಾರದಲ್ಲಿ ಏನಾಯಿತು? ಐದು ಕ್ಷೇತ್ರ ಗೆಲ್ಲಲು ತಿಣುಕಾಡಿದರು. ತಮಿಳುನಾಡಿನಲ್ಲಿ ಡಿಎಂಕೆಯನ್ನು ಕಾಡಿ ಬೇಡಿ ಪಡೆದುಕೊಂಡ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳೇ ಗತಿಯಿಲ್ಲ. ಅಂತಹ ಪಕ್ಷ ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಎಷ್ಟು ಸರಿ? ನಮ್ಮದು ಕರ್ನಾಟಕದಲ್ಲಿ ಸಣ್ಣ ಪಕ್ಷ, ದೊಡ್ಡ ಪಕ್ಷ ಕಾಂಗ್ರೆಸ್ ಕಥೆ ಏನಾಗಿದೆ? ಇಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಅವರ ಪಕ್ಷದವರಿಗೆ ಹೊಟ್ಟೆಕಿಚ್ಚು
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಕ್ಕೆ ನಮಗೇನು ಹೊಟ್ಟೆಕಿಚ್ಚು ಇಲ್ಲ. ಅವರ ಪಕ್ಷದಲ್ಲೇ ಅನೇಕರಿಗೆ ಹೊಟ್ಟೆ ನೋವು ಇದೆ. ಕೆಲವರು ದಿನ ಬೆಳಗ್ಗೆ ಆದರೆ ಟೈಮ್ ನೋಡಿಕೊಂಡು ಸಮಯ ಬರುತ್ತೆ ಅಂತ ಓಡಾಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿರೋದು ಅವರ ಪಕ್ಷದ ಕೆಲವರಿಗೆ ವಿಪರೀತ ಹೊಟ್ಟೆಕಿಚ್ಚು ತರಿಸಿದೆ ಎಂದು ಅವರು ಧಾರ್ಮಿಕವಾಗಿ ಉತ್ತರಿಸಿದರು.
ಐದು ವರ್ಷ ಸಿದ್ದರಾಮಯ್ಯ ಅವರು ಸಿಎಂ ಆಗಿರುತ್ತಾರಾ ಎನ್ನುವ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ನಾನು ಪೂರ್ಣಾವಧಿ ಸಿಎಂ ಎಂದು ಸ್ವತಃ ಅವರೇ ಹೇಳುತ್ತಾರೆ. ಮತ್ತೊಂದು ಕಡೆ ಹೈಕಮಾಂಡ್ ತೀರ್ಮಾನ ಅಂತಾರೆ. ಅವರ ಮಗ ನನ್ನ ತಂದೆಯೇ ಐದು ವರ್ಷ ಸಿಎಂ ಎನ್ನುತ್ತಾರೆ. ಮುಂದೆಯೂ ಅವರೇ ಸಿಎಂ ಅಂತಾರೆ. ಸಿದ್ದರಾಮಯ್ಯ ಹೈ ಕಮಾಂಡ್ ಅನ್ನು ಹೆದರಿಸಿ ಇಟ್ಟುಕೊಂಡಿದ್ದಾರೆ. ಯಾವ ಕಾರಣಕ್ಕೂ ಅವರು ಸಿಎಂ ಸ್ಥಾನ ಬಿಟ್ಟುಕೊಡಲ್ಲ, ಕೊಡುವ ಪ್ರಶ್ನೆಯು ಇಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದರು.
ಸ್ವಾರ್ಥಕ್ಕಾಗಿ ಕನಸು ಕಾಣುವವರಿಗೆ ಭಗವಂತ ಒಲಿಯುವುದಿಲ್ಲ
ಮುಖ್ಯಮಂತ್ರಿ ಸ್ಥಾನದ ಕನಸು ಎಲ್ಲರೂ ಕಾಣಬಹುದು. ತಪ್ಪೇನು ಅಲ್ಲ, ಕನಸು ಕಾಣಲು ಎಲ್ಲರಿಗೂ ದೇವರು ಅವಕಾಶ ಕೊಟ್ಟಿದ್ದಾನೆ. ಭಗವಂತ ಆ ಕನಸನ್ನು ನನಸು ಮಾಡಬೇಕು ಅಷ್ಟೇ. ಒಬ್ಬಬ್ಬೋರಿಗೆ ಒಂದೊಂದು ನಂಬಿಕೆ ಇದೆ. ಸ್ವಾರ್ಥಕ್ಕಾಗಿ ಕನಸು ಕಾಣುವವರಿಗೆ ಭಗವಂತ ಒಲಿಯುವುದಿಲ್ಲ. ಪ್ರಯತ್ನ ವಿಫಲ ಆದರೂ ಪ್ರಾರ್ಥನೆ ವಿಫಲ ಆಗಲ್ಲ ಎನ್ನುತ್ತಾರೆ. ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಅದು ಆಗಲ್ಲ. ಬಾಯಲ್ಲಿ ಹೇಳಿದಷ್ಟು ಸುಲಭವೂ ಅಲ್ಲ ಎಂದು ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.