ದೊಡ್ಡಬಳ್ಳಾಪುರ: ಕೃಷಿ ಕಾಯ್ದೆ ತಿದ್ದುಪಡಿ ಖಂಡಿಸಿ ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಟ್ರಾಕ್ಟರ್ ರ್ಯಾಲಿಗೆ ತೆರಳುತ್ತಿದ್ದ ರೈತ ಸಂಘದ ಮುಖಂಡರನ್ನು ಪೊಲೀಸರು ತಡೆದ ಕಾರಣ, ದೊಡ್ಡಬಳ್ಳಾಪುರದಲ್ಲಿಯೇ ಟ್ರಾಕ್ಟರ್ ರ್ಯಾಲಿ ನಡೆಸಿದ ರೈತರು ಕೇಂದ್ರ ಸರ್ಕಾರದ ವಿರುದ್ದ ಅಕ್ರೋಶ ಹೊರಹಾಕಿದರು.
ಟ್ರಾಕ್ಟರ್ ಗಳಲ್ಲಿ ಬೆಂಗಳೂರಿಗೆ ಹೊರಟಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರನ್ನು ನಗರದ ಎಪಿಎಂಸಿ ಬಳಿ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ರೈತ ಸಂಘಟನೆಗಳ ಮುಖಂಡರ ನಡುವೆ ಮಾತಿನ ಚಕಮಕಿನಡೆಯಿತು. ರೈತ ಸಂಘದವರ ನೇರವಿಗೆ ವಿವಿಧ ಸಂಘಟನೆಗಳ ಮುಖಂಡರು ಧಾವಿಸಿ ಬೆಂಬಲ ಸೂಚಿಸಿದರು.
ಬೆಂಗಳೂರಿನ ರ್ಯಾಲಿಗೆ ತೆರಳ ಬೇಕೆಂದು ಪಟ್ಟು ಹಿಡಿದ ರೈತ ಸಂಘಟನೆಗಳ ಮುಖಂಡರನ್ನು ಡಿವೈಎಸ್ಪಿ ಟಿ.ರಂಗಪ್ಪ ಮನವೊಲಿಸಲು ಮುಂದಾದರು. ಆದರೆ ರೈತ ಸಂಘಟನೆಗಳ ಮುಖಂಡರ ಆಕ್ರೋಶ ಮಣಿದು ನಗರ ವ್ಯಾಪ್ತಿಯಲ್ಲಿ ರ್ಯಾಲಿ ನಡೆಸಲು ಅವಕಾಶ ಮಾಡಿಕೊಟ್ಟರು.
ನಗರದಲ್ಲಿ ಎಪಿಎಂಸಿ ಮುಂಭಾಗದಿಂದ ಆರಂಭವಾದ ಟ್ರಾಕ್ಟರ್ ರ್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ. ಕೇಂದ್ರ ಸರ್ಕಾರದ ವಿರುದ್ದ ದಿಕ್ಕಾರ ಕೂಗಿ, ಕೃಷಿ ತಿದ್ದು ಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿದರು.
ಶಾಸಕ ಟಿ.ವೆಂಕಟರಮಣಯ್ಯ ಬೆಂಬಲ: ರ್ಯಾಲಿ ತಾಲೂಕು ಕಚೇರಿಗೆ ಬರುವ ವೇಳೆಗೆ ಶಾಸಕ ಟಿ.ವೆಂಕಟರಮಣಯ್ಯ ಸ್ಥಳಕ್ಕೆ ಬಂದು ರೈತ ಸಂಘಟನೆಗಳ ಹೋರಾಟಕ್ಕೆ ಬೆಂಬಲ ಸೂಚಿಸಿ. ಕೇಂದ್ರ ಸರ್ಕಾರದ ನಿಲುವನ್ನು ತೀವ್ರವಾಗಿ ಖಂಡಿಸಿದರು. ಅಲ್ಲದೆ ರೈತರ ಸಮಸ್ಯೆಯನ್ನು ಕೂಡಲೆ ಬಗೆ ಹರಿಸುವಂತೆ ಆಗ್ರಹಿಸಿದರು.
ರೈತ ಸಂಘದ ಮುಖಂಡರು ಮಾತನಾಡಿ, ದೆಹಲಿಯಲ್ಲಿ ರೈತರ ರ್ಯಾಲಿಗೆ ಅನುಮತಿ ದೊರಕಿದ್ದರೆ, ರಾಜ್ಯ ಬಿಜೆಪಿ ಸರ್ಕಾರ ಪೊಲೀಸರ ಮೂಲಕ ರೈತರ ಹೊರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇದೇ ಧೋರಣೆ ಮುಂದುವರಿದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಂತೆ ದೇಶದ ಪ್ರತಿ ಹಳ್ಳಿಗಳ್ಳಲ್ಲಿಯು ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಅಪಾಯಕಾರಿ ವರ್ತನೆಗೆ ಆಕ್ರೋಶ: ನಗರದಲ್ಲಿ ಟ್ರಾಕ್ಟರ್ ರ್ಯಾಲಿ ಆರಂಭವಾದ ವೇಳೆ, ಒಂದಿಬ್ಬರು ಟ್ರಾಕ್ಟರ್ ಮುಂಭಾಗದಲ್ಲಿ ಅಪಾಯಕಾರಿಯಾಗಿ ಕೂತು ಅತಿರೇಕದ ವರ್ತನೆ ತೋರಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಪೊಲೀಸರ ಎದುರಲ್ಲಿಯೇ ಈ ವರ್ತನೆ ತೋರಿದ್ದರು ಪೊಲೀಸರು ಮೌನಕ್ಕೆ ಶರಣಾಗಿದ್ದು ತೀವ್ರ ಚರ್ಚೆಗೆ ಕಾರಣವಾದರೆ, ಆಯತಪ್ಪಿ ಬಿದ್ದಿದ್ದರೆ ಮುಂದಾಗಬಹುದಾಗಿದ್ದ ಅವಘಡಕ್ಕೆ ಹೊಣೆಯಾರದು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.