ದೊಡ್ಡಬಳ್ಳಾಪುರ : ಋತುಸ್ರಾವ ಎಂಬುದು ಮುಜುಗರ ಪಡೆಯುವ ವಿಷಯವಲ್ಲ, ಇದೊಂದು ನೈಸರ್ಗಿಕ ಪ್ರಕ್ರಿಯೆ.ಮಹಿಳೆಯರು ಋತುಚಕ್ರ ವೇಳೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಹಾಗೂ ಈ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ನಾಗರಾಜ ಹೇಳಿದರು.
ಮುಟ್ಟಿನ ಸ್ವಚ್ಛತೆಯ ಅಂತರರಾಷ್ಟ್ರೀಯ ದಿನಾಚರಣೆ (International Menstrual Hygiene Day) ಹಾಗೂ ಋತುಚಕ್ರ ಜಾಗೃತಿ ಸಪ್ತಾಹದ (International Menstrual Awareness Week) ಅಂಗವಾಗಿ ಸ್ವಚ್ಛ ಭಾರತ ಅಭಿಯಾನಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ವತಿಯಿಂದ ದೇವನಹಳ್ಳಿ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾದ ಋತುಸ್ರಾವ ನೈರ್ಮಲ್ಯ ದಿನಾಚರಣೆ ಹಾಗೂ ಸಪ್ತಾಹ ಕಾರ್ಯಕ್ರಮವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ನಾಗರಾಜ ಅವರು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.ಮುಟ್ಟಿನ ಸಂದರ್ಭದಲ್ಲಿ ಶೇಕಡ 50 ರಷ್ಟು ಮಹಿಳೆಯರು ಅಸುರಕ್ಷತಾ ವಿಧಾನಗಳನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಮಹಿಳೆಯರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆಗಳಿರುವುದರಿಂದ ಮುಟ್ಟಿನ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಗ್ರಾಮಗಳಲ್ಲಿ ಹೆಚ್ಚಾಗಿ ಏರ್ಪಡಿಸಬೇಕೆಂದರು.
ಋತುಚಕ್ರವನ್ನು 28 ದಿನಗಳೆಂದು ಪರಿಗಣಿಸಿರುವ ಹಿನ್ನಲೆಯಲ್ಲಿ ಈ ಬಾರಿಯ ದಿನಾಚರಣೆಯನ್ನು 23 ಬಿಳಿ ಮಣಿ 5 ಕೆಂಪು ಮಣಿಗಳನ್ನೊಳಗೊಂಡ ಬ್ಯಾಂಡ್‍ಅನ್ನು ಮಹಿಳೆಯರು ಕೈಗೆ ಧರಿಸುವ ಮೂಲಕ ಋತುಸ್ರಾವ ಜಾಗೃತಿ ಸಪ್ತಾಹ ದಿನವನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೋವಿಂದರಾಜು, ದೇವನಹಳ್ಳಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಡಿ.ವಸಂತಕುಮಾರ್, ತಾಲ್ಲೂಕು ವೈದ್ಯೆ ಡಾ. ನೀತುರಾಣಿ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ, ಜಿಲ್ಲಾ ಸಮಾಲೋಚಕರುಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು, ಮಹಿಳೆಯರು ಉಪಸ್ಥಿತರಿದ್ದರು.