ಗೌರಿಬಿದನೂರು: ಕರೊನಾ ಅಬ್ಬರ ಕಡಿಮೆಯಾಗುತ್ತಿರುವ ಬೆನ್ನಲ್ಲೇ ದೇಶದಲ್ಲಿ ಹಕ್ಕಿ ಜ್ವರದ ಆತಂಕ ಮನೆ ಮಾಡಿದೆ. ಈಗಾಗಲೇ ದೇಶದ ಹಲವೆಡೆ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ರಾಜ್ಯಕ್ಕೂ ಹಕ್ಕಿ ಜ್ವರ ಕಾಲಿಡುವ ಆತಂಕ ಶುರುವಾಗಿದೆ.
ತಾಲೂಕಿನ ಕಾದಲವೇಣಿ ಗ್ರಾಮದ ಕೆರೆಯಲ್ಲಿ ನೂರಾರು ಕೊಕ್ಕರೆಗಳು ಪ್ರಾಣ ಬಿಟ್ಟಿವೆ. ನೂರಾರು ಎಕರೆ ವಿಶಾಲವಾದ ಕೆರೆಯಲ್ಲಿ ಸಾವಿರಾರು ಜಾಲಿ ಮರಗಳಿದ್ದು ಜಾಲಿ ಮರಗಳ ತುಂಬೆಲ್ಲಾ ಈಗ ಸತ್ತ ಕೊಕ್ಕರೆಗಳು ನೇತಾಡುತ್ತಿರುವ ದೃಶ್ಯಗಳು ಸಾಮಾನ್ಯ ಎಂಬಂತಾಗಿದೆ. ಅಲ್ಲದೆ ನಾಯಿಯೊಂದು ಗ್ರಾಮದೊಳಗೆ ಸತ್ತ ಕೊಕ್ಕರೆಗಳನ್ನು ಹೊತ್ತು ತಂದು ತಿನ್ನುವುದನ್ನು ಕಂಡ ಗ್ರಾಮಸ್ಥರು ಕೆರೆಯೊಳಗೆ ಹೋಗಿ ನೋಡಿದಾಗ ಮೂಕ ಪಕ್ಷಿಗಳ ಸಾವನಪ್ಪಿರುವುದು ಕಣ್ಣಿಗೆ ಗೋಚರಿಸಿದೆ.
ಇದೇ ಮೊದಲ ಬಾರಿಗೆ ಕೆರೆ ನೀರಿನಿಂದ ಕೂಡಿರುವ ಕಾರಣ ಇತರೆ ಭಾಗಗಳಿಂದ ಸಾವಿರಾರು ಕೊಕ್ಕೆರೆಗಳು ವಲಸೆ ಬಂದು ಕೆರೆಯಲ್ಲಿ ಬೀಡುಬಿಟ್ಟಿವೆ. ಆದರೆ ಈಗ ದಿಢೀರ್ ಅಂತ ಕೊಕ್ಕೆರೆಗಳು ಸಾವನ್ನಪ್ಪಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಮೊದಲೇ ಹಕ್ಕಿ ಜ್ವರದ ಆತಂಕ ದೇಶದಲ್ಲಿರುವುದರಿಂದ ತಮ್ಮೂರಿಗೆ ಹಕ್ಕಿ ಜ್ವರ ಬಂದೇ ಬಿಡ್ತು. ಇದರಿಂದಲೇ ಇಷ್ಟೊಂದು ಪ್ರಮಾಣದಲ್ಲಿ ಕೊಕ್ಕರೆಗಳು ಬಲಿಯಾಗಿದೆ ಎನ್ನುವುದು ಗ್ರಾಮಸ್ಥರ ಅನುಮಾನವಾಗಿದೆ.
ಕೊಕ್ಕೆರಗಳ ಸಾವಿನ ವಿಷಯ ತಿಳಿದ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪಶು ವೈದ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೆರೆಗೆ ಭೇಟಿ ನೀಡಿ ಪಶು ವೈದ್ಯ ಇಲಾಖಾಧಿಕಾರಿಗಳು ಮೃತ ಪಕ್ಷಿಗಳ ಸ್ಯಾಂಪಲ್ ಕಲೆಕ್ಟ್ ಮಾಡಿದ್ದು, ಇದೀಗ ಕೊಕ್ಕೆರೆಗಳ ಸಾವಿನ ಸತ್ಯ ತಿಳಿಯುವುದಕ್ಕೆ ಮುಂದಾಗಿದ್ದಾರೆ. ಕೊಕ್ಕರೆಗಳ ಸಾವಿನ ಸತ್ಯದ ವರದಿ ನಂತರ ಇದು ಹಕ್ಕಿ ಜ್ವರವೇ..? ಇಲ್ಲ ಬೇರೆ ಕಾರಣದಿಂದ ಪಕ್ಷಿಗಳು ಸಾವನ್ನಪ್ಪಿದೆಯಾ ಎಂಬುವುದು ಬಹಿರಂಗವಾಗ ಬೇಕಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.