ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಗರದ ತಾಲೂಕು ಕಚೇರಿಯಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯ ಕಾರ್ಯಕ್ರಮ ನಡೆಯಿತು.
ತಹಸೀಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ, ವಚನಕಾರ ಚೌಡಯ್ಯ ಕೇವಲ ನದಿ ದಾಟಿಸುವ ಅಂಬಿಗರಲ್ಲ. ಬದಲಿಗೆ ಬದುಕಿನ ಅನೇಕ ಸಂಶಯಗಳನ್ನು ನಿವಾರಿಸಿ ದೇವರನ್ನು ಕಾಣುವ ಪಯಣದಲ್ಲಿ ಗುರಿ ತಲುಪಿಸುವ ಅಂಬಿಗರಾಗಿದ್ದಾರೆ. ವಚನಗಳ ಮೂಲಕ ಸಮಾಜದಲ್ಲಿ ಮನೆಮಾಡಿದ್ದ ಕೆಟ್ಟ ಸಂಪ್ರದಾಯಗಳನ್ನು ನಿಷ್ಠುರವಾಗಿ ಟೀಕಿಸಿದವರು. 12 ನೇ ಶತಮಾನದಲ್ಲಿ ಅವಿದ್ಯಾವಂತರು ಇದ್ದ ಕಾಲದಲ್ಲಿಯೇ ಸಾಮಾಜಿಕ ಕ್ರಾಂತಿಯಾಗಿತ್ತು. ಈ ನಿಟ್ಟಿನಲ್ಲಿ ಸಂಕುಚಿತ ಮನೋಭಾವ ಬಿಟ್ಟು, ಅಂಬಿಗರ ಚೌಡಯ್ಯ ಅವರಂತಹ ಮಹಾಮಹಿಮರು ಹಾಕಿಕೊಟ್ಟ ಹಾದಿಯಲ್ಲಿ ಉತ್ತಮ ಸಮಾಜ ನಿರ್ಮಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಸೋಮಶೇಖರ್, ತೋಟಗಾರಿಕೆ ಇಲಾಖೆಯ ಎಡಿಎ ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮೀನರಸಿಂಹ, ಗ್ರಾಮ ಲೆಕ್ಕಿಗ ರಾಜೇಂದ್ರ ಬಾಬು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಪ್ರಮೀಳಾ ಮಹದೇವ್ ಹಾಗೂ ಗಂಗಾಮತಸ್ಥ ಸಮುದಾಯದ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.