ಬೆಂ.ಗ್ರಾ.ಜಿಲ್ಲೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ರೈತರು ನಾಳೆ ರಾಜ್ಯಾದ್ಯಂತ ಟ್ರ್ಯಾಕ್ಟರ್ ಪರೇಡ್ ಮೂಲಕ ರಾಜ್ಯದ ರಾಜಧಾನಿಗೆ ತೆರಳಲಿದ್ದು, ರೈತ ಮುಖಂಡರ ಜೊತೆ ಮಾತನಾಡಿ, ರೈತರ ಮನವೊಲಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಪ್ರಸ್ತುತವಿರುವ ಸರ್ಕಾರವು ರೈತರ ಪರವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ|| ಕೆ.ಸುಧಾಕರ್ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸೋಮವಾರ ಭೇಟಿ ನೀಡಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಕೃಷಿ ಕಾಯ್ದೆ ತಿದ್ದುಪಡಿ ಉದ್ದೇಶ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದು ಮತ್ತು ದಲ್ಲಾಳಿಗಳ ಹಾವಳಿ ತಪ್ಪಿಸುವುದು ಮಾತ್ರ ಎಂದರಲ್ಲದೆ, ರೈತರ ಹಿತಾಸಕ್ತಿಯೇ ಸರ್ಕಾರದ ಹಿತಾಸಕ್ತಿ ಎಂದರು.
ದಲ್ಲಾಳಿಗಳಿಂದ ರೈತರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸಿದ್ದು, ಕಾಯ್ದೆಯನ್ನು ವಿರೋಧಿಸಿದರೆ ದಲ್ಲಾಳಿಗಳಿಗೆ ಮಾನ್ಯತೆ ನೀಡಿದಂತೆ ಆಗುತ್ತದೆ ಎಂದ ಸಚಿವರು ಕಾಯ್ದೆಯ ಸಂಪೂರ್ಣ ಮಾಹಿತಿಯನ್ನು ತಿಳಿದ ಮೇಲೆ, ಕಾಯ್ದೆಯ ಉಪಯೋಗ ಅರಿತು ಯಾರು ವಿರೋಧಿಸುವುದಿಲ್ಲ ಎಂದು ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಹೋರಾಟ, ಪ್ರತಿಭಟನೆ ಸಹಜವಾಗಿದ್ದು, ಕೃಷಿ ಕಾಯ್ದೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಿಲಾಗುವುದು ತಿಳಿಸಿದರು.
ಬ್ರಿಟನ್‌ನ ರೂಪಾಂತರ ಕೊರೋನಾ ವೈರಸ್‌ಗೆ ಒಳಗಾಗಿದ್ದ 16 ಜನ ಗುಣಮುಖರಾಗಿ ಮನೆಗೆ ತೆರಳಿದ್ದು, ಸದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದರು ಅಲ್ಲದೆ, ಬ್ರಿಟನ್ ಮೂಲದಿಂದ ಬಂದ ವಿಮಾನ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ ಸೋಂಕು ಖಚಿತವಾದಲ್ಲಿ, ಸರ್ಕಾರವೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದ್ದು, ರೂಪಾಂತರ ವೈರಸ್ ಹರಡಲು ಅವಕಾಶವಿಲ್ಲ ಎಂದರು.
ಸರ್ಕಾರ ಹಾಗೂ ಅಧಿಕಾರಿಗಳು ಕ್ರಿಯಾಶೀಲರಾಗಿ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಂದ ನಂತರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿಗಳಿಗೂ 2ನೇ ಹಂತದಲ್ಲಿ ಕೊರೋನಾ ಲಸಿಕೆ ನೀಡಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ.ಡಿ.ಚನ್ನಣ್ಣನವರ್, ಅಪರ ಜಿಲ್ಲಾಧಿಕಾರಿ ಜಗದೀಶ್.ಕೆ.ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಂಜುಳಾದೇವಿ, ಡಿವೈಎಸ್ಪಿ ಟಿ.ರಂಗಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಮಹೇಶ್.ಎನ್.ಎಸ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.