ದೊಡ್ಡಬಳ್ಳಾಪುರ: ಕೋವಿಡ್ 3ನೇ ಅಲೆ ವ್ಯಾಪಿಸದಂತೆ ತಡೆಗಟ್ಟಲು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸರ್ಕಾರ ಉಚಿತ ಲಸಿಕೆ ನೀಡಬೇಕಾಗಿರುವ ಅಗತ್ಯವಿದ್ದು, ವಿಶೇಷವಾಗಿ ಕಾರ್ಮಿಕರಿಗೆ ಆದ್ಯತೆ ನೀಡಬೇಕಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ಅವರು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಇಂಡೋ ಮಿಮ್ ಕಾರ್ಖಾನೆಯ ಕಾರ್ಮಿಕರಿಗೆ ಆರೋಗ್ಯ ಇಲಾಖೆಯಿಂದ ನೀಡಲಾದ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ನಿರ್ವಹಣೆ ಮಾಡುವಲ್ಲಿ ವಿಫಲವಾಗುತ್ತಿವೆ. ಕೇಂದ್ರ ಸರ್ಕಾರ ಲಸಿಕೆಯನ್ನು ರಪ್ತು ಮಾಡುವ ಮೂಲಕ ದೇಶದಲ್ಲಿ ಲಸಿಕೆ ಅಭಾವ ಸೃಷ್ಟಿಯಾಗಲು ಕಾರಣವಾಗಿದೆ. ವಿಶೇಷವಾಗಿ ಕಾರ್ಮಿಕರಿಗೆ ಲಸಿಕೆ ಸರಿಯಾದ ಸಮಯದಲ್ಲಿ ದೊರೆಯುತ್ತಿಲ್ಲ. ಇಂಡೋ ಮಿಮ್ ಕಾರ್ಖಾನೆಯಲ್ಲಿ ವೈದ್ಯಕೀಯ ಪರಿಕರಗಳಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ತಯಾರು ಮಾಡುತ್ತಿದ್ದು, ಇಂತಹ ಕಾರ್ಮಿಕರಿಗೆ ಲಸಿಕೆ ಅಗತ್ಯವಿರುವುದನ್ನು ಮನಗಂಡು ಇಂದು ಲಸಿಕೆ ಹಾಕಿಸಲಾಗುತ್ತಿದೆ. ಅರ್ಹ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಮಾಸ್ಕ್ ಹಾಕಿಕೊಳ್ಳುವುದು, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿ ಅನುಸರಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಪರಮೇಶ್ವರ ಹಾಗೂ ಇಂಡೋ ಮಿಮ್ ಕಾರ್ಖಾನೆಯ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….