ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಜೂನ್ 21ರವರೆಗೆ ಕಠಿಣ ಲಾಕ್ಡೌನ್ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರೊಂದಿಗೆ ಕೊವಿಡ್ ಪರೀಕ್ಷೆಗಳನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಅರುಳ್ ಕುಮಾರ್ ತಿಳಿಸಿದರು.
ನಗರದ ವಿವಿಧೆಡೆಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್ ಗಳಲ್ಲಿ ನಡೆಯುತ್ತಿದ್ದ ವಾಹನ ತಪಾಸಣೆ ಸ್ಥಳಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಎಪಿಎಂಸಿಯಲ್ಲಿ ಬೆಳಗ್ಗೆ 10ರವರೆಗೆ ನಡೆಸಲಾಗುತ್ತಿದ್ದ ಮಾರುಕಟ್ಟೆಯನ್ನು ಬೆಳಗ್ಗೆ 8 ಗಂಟೆಗಳ ವರೆಗೆ ಸೀಮಿತಗೊಳಿಸಲಾಗಿದ್ದು, ಉಳಿದಂತೆ 6ರಿಂದ10ರವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಕೊಳ್ಳಲು ಸಮಯ ನಿಗದಿಪಡಿಸಲಾಗಿದೆ ಎಂದರು.
ಡಿವೈಎಸ್ಪಿ ಟಿ.ರಂಗಪ್ಪ ಮಾತನಾಡಿ, ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾತ್ರ ಲಾಕ್ಡೌನ್ ತೆರವಾಗಿದ್ದು, 2 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶವಿದೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ಡೌನ್ ಮುಂದುವರೆದಿದ್ದು, 6 ರಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶವಿದ್ದು, ಇದರಲ್ಲಿ ಯಾವುದೇ ಗೊಂದಲ ಬೇಡ. ಈ ಸಮಯದಲ್ಲಿ ಕೋವಿಡ್ ಇಲ್ಲ ಎಂದು ಭಾವಿಸಿ ಸಾರ್ವಜನಿಕರು ಹೇಗೆಂದರೆ ಹಾಗೆ ವರ್ತಿಸುವ ಹಾಗಿಲ್ಲ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ದೊಡ್ಡಬಳ್ಳಾಪುರ ಸುತ್ತ ಬ್ಯಾರಿಕೇಡ್ ಹಾಕಿ ಪೊಲೀಸ್ ಕಾವಲು ಹಾಕಲಾಗಿದೆ. ಅನಗತ್ಯವಾಗಿ ಓಡಾಡುವ ವಾಹನಗಳ ಮೇಲೆ ವಿಪತ್ತು ನಿರ್ವಹಣೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದು.
ತಾಲೂಕಿನ ಪಾಸಿಟಿವಿಟಿ ದರ ಇಳಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಊಪಿಸಲಾಗಿದ್ದು, ಗ್ರಾಮದ ಮುಖಂಡರು ಇದಕ್ಕೆ ಸಹಕರಿಸಬೇಕಿದೆ. ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಿ ಸಹಕರಿಸಬೇಕಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ದೊಡ್ಡಬಳ್ಳಾಪುರ ತಾಲೂಕು ಪಾಸಿಟಿವ್ ರೇಟ್ ಪಟ್ಟಿಯಲ್ಲಿ ಕೆಂಪು ವಲಯಕ್ಕೆ ಸೇರ್ಪಡೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ದಿ.ಜಗದೀಶ್ ವೃತ್ತ, ಮಾರಸಂದ್ರ ಗಡಿ, ಡಿ ಕ್ರಾಸ್, ಬಸವಭವನ, ದೊಡ್ಡಬೆಳವಂಗಲ, ಮಧುರೆ ಹಾಗೂ ಗುಂಜೂರು ಸೇರಿದಂತೆ ಏಳು ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಿ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡಲು ಸೂಚಿಸಲಾಗಿದೆ.
ಗ್ರಾಮ ಪಂಚಾಯಿತಿ ವಾರು ಹಾಗೂ ನಗರಸಭೆ ವ್ಯಾಪ್ತಿಗಳಲ್ಲಿ ಕೋವಿಡ್ ಸ್ವಾಬ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರೊಂದಿಗೆ ಸಾರ್ವಜನಿಕ ಸ್ಥಳಗಳಾದ ಸಬ್ ರಿಜಿಸ್ಟರ್ ಕಚೇರಿ, ಎಪಿಎಂಸಿ, ಪೊಲೀಸ್ ಕ್ವಾಟ್ರಸ್, ತಾಲೂಕು ಕಚೇರಿಗಳಲ್ಲಿಯೂ ಕೊವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಅಲ್ಲದೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ, ಪೆಟ್ರೋಲ್ ಭಂಕ್ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ನೀಡಲು ಸೌಲಭ್ಯ ಕಲ್ಪಿಸಿದ್ದು, ಯಾವುದೇ ಅನಾನುಕೂಲವಾಗದಂತೆ ಅವಕಾಶ ನೀಡಲಾಗಿದೆ.
ಇಂದು ಗ್ರಾಮಾಂತರ ಭಾಗದಲ್ಲಿ ಅನವಶ್ಯಕವಾಗಿ ರಸ್ತೆಗಿಳಿದ 59 ವಾಹನ ಹಾಗೂ ನಗರ ವ್ಯಾಪ್ತಿಯಲ್ಲಿ 102 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ತಹಶೀಲ್ದಾರ್ ಟಿ.ಎಸ್.ಶಿವರಾಜ್, ಇನ್ಸ್ಪೆಕ್ಟರ್ ಸತೀಶ್, ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಬಿ.ಎಂ.ಗೋವಿಂದ್ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….