ದೊಡ್ಡಬಳ್ಳಾಪುರ: ಕರೊನಾ ಸೋಂಕಿನ ಮೂರನೇ ಅಲೆ ಮಕ್ಕಳಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಜನರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಕರೆ ನೀಡಿದರು.
ನಗರದ ತಾಲೂಕು ಕಚೇರಿ ಆವರಣದಿಂದ ಜಿಲ್ಲಾಡಳಿತ, ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಕ್ಕಳ ತಜ್ಞರ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದಡಿ, ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಿಗೆ ಕೋವಿಡ್ ಹರಡಲು ಆರಂಭವಾದರೆ ಪರಿಸ್ಥಿತಿ ಗಂಭೀರವಾಗಿರುತ್ತದೆ. ಈ ದಿಸೆಯಲ್ಲಿ ವೈದ್ಯರು, ಆಶಾ ಕಾರ್ಯಕರ್ತೆಯರು, ಗ್ರಾಮಗಳಿಗೆ ತೆರಳಿ ಮಾರ್ಗದರ್ಶನ ನೀಡಬೇಕಿದೆ. ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದು ಪೋಷಕರ ಕರ್ತವ್ಯವಾಗಿದೆ. ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ಸರ್ಕಾರ ಪೌಷ್ಟಿಕ ಆಹಾರ ನೀಡುತ್ತಿದ್ದು, ಇದರ ಸದ್ಬಳಕೆಯಾಗಬೇಕಿದೆ ಎಂದರು.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ, ಇಂದಿನಿಂದ ಜಿಲ್ಲೆಯಾದ್ಯಂತ ಮಕ್ಕಳ ತಜ್ಞರ ನಡಿಗೆ ಹಳ್ಳಿ ಕಡೆಗೆ ಎಂಬ ವಿನೂತನ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ. ತಾಲೂಕು ಮಟ್ಟದಲ್ಲಿ ಕಾರ್ಯಕ್ರಮದಲ್ಲಿ 6 ವೈದ್ಯಕೀಯ ತಂಡವನ್ನು ವ್ಯವಸ್ಥೆ ಮಾಡಲಾಗಿದೆ. ಈ ತಂಡಗಳ ಮೂಲಕ 20ರಿಂದ 25 ದಿನಗಳವರೆಗೆ ತಾಲೂಕಿನ ವಿವಿಧ ಗ್ರಾಮ ಹಾಗೂ ವಾರ್ಡ್ ಗಳಿಗೆ ಬೇಟಿ ನೀಡಿ ಮಕ್ಕಳ ತಪಾಸಣೆ ಮಾಡಲಾಗುವುದು. ಅಪೌಷ್ಟಿಕತೆ ಹೊಂದಿರುವ ಮಕ್ಕಳನ್ನು ಗುರುತಿಸಿ ಪೌಷ್ಟಿಕಾಂಶದ ಕಿಟ್ ನೀಡಲಾಗುವುದು. ತಾಲೂಕಿನಲ್ಲಿ 17 ತೀರ ಅಪೌಷ್ಟಿಕತೆ ಇರುವ ಮಕ್ಕಳು ಹಾಗೂ 426 ಸಾಧಾರಣ ಮಕ್ಕಳನ್ನು ಗುರುತಿಸಲಾಗಿದೆ. ಮಕ್ಕಳಿಗೆ ಯಾವುದೇ ತೊಂದರೆ ಇದ್ದರೆ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಮತ್ತು ಕೋವಿಡ್ ಸುರಕ್ಷತೆಯ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಮೇಶ್, ಸಿಡಿಪಿಒ ಅನಿತಾಲಕ್ಷ್ಮೀ, ಬಿಇಓ ಆರ್.ವಿ.ಶುಭಮಂಗಳ ಮತ್ತಿರರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….