ಬೆಂ.ಗ್ರಾ.ಜಿಲ್ಲೆ: ಲಾಕ್‍ಡೌನ್ ಬಿಡುವು ದೊರಕಿದ ನೆಮ್ಮದಿಯ ಬೆನ್ನಲ್ಲೆ, ಸರಗಳ್ಳರ ಹಾವಳಿ ಜಿಲ್ಲೆಯ ಜನತೆಯಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.
ಬುಧವಾರ ಒಂದೇ ದಿನ ಜಿಲ್ಲೆಯ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆಸುವ ಮೂಲಕ, ಸರಗಳ್ಳರು ಪೊಲೀಸ್ ಇಲಾಖೆಗೆ ಸವಾಲು ಎಸೆದಿದ್ದಾರೆ.
ಬೆಳಗ್ಗೆ 8.30 ರ ವೇಳೆ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ, 10ಗಂಟೆಗೆ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿ, 10.45ಕ್ಕೆ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿ, ಹಾಗೂ 10.45ಕ್ಕೆ ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆಸಿರುವ ಕುರಿತು ದೂರು ದಾಖಲಾಗಿದೆ.
ಸರಣಿ ಸರಗಳ್ಳತನದ ಬೆನ್ನಲ್ಲೆ ಪೊಲೀಸ್ ಇಲಾಖೆ ಸರಗಳ್ಳರ ಎಡೆಮುರಿಕಟ್ಟಲು ಕಾರ್ಯಾಚರಣೆಗೆ ಇಳಿದಿದ್ದು, ಘಟನೆ ನಡೆದ ವ್ಯಾಪ್ತಿಯಲ್ಲಿದ್ದ ಸಿಸಿ ಕ್ಯಾಮರಾಗಳ ಪರಿಶೀಲನೆ ನಡಸಿ, ಬ್ಲಾಕ್ ಪಲ್ಸರ್ ನಲ್ಲಿ ಬಂದ ಇಬ್ಬರು ಆರೋಪಿಗಳು ಕೃತ್ಯ ನಡೆಸಿರುವುದಾಗಿ ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸಿರುವ ಪೊಲೀಸ್ ಇಲಾಖೆ ವಾಹನಗಳ ತಪಾಸಣೆ ನಡೆಸುತ್ತಿದ್ದು, ಒಡವೆಗಳನ್ನು ಧರಿಸಿಕೊಂಡು ನಿರ್ಜನ ಪ್ರದೇಶದಲ್ಲಿ ಬೇಕಾಬಿಟ್ಟಿಯಾಗಿ ಓಡಾಟ ನಡೆಸದಂತೆ ಮನವಿ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಸರಣಿ ಸರಗಳ್ಳತನ ನಡೆದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಹಾಗೂ ವಿವಿಧ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಗಳು ವಾಹನ ತಪಾಸಣೆ ಕಾರ್ಯದಲ್ಲಿ ತೊಡಗಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..