ದೊಡ್ಡಬಳ್ಳಾಪುರ: ರೈತರ ಆತ್ಮಹತ್ಮೆಗಳನ್ನು ತಡೆಗಟ್ಟಿ ರೈತರ ಆದಾಯ ದ್ವಿಗುಣಗೊಳಿಸುವ ಕೃಷಿ ಕಲ್ಯಾಣ ಯೋಜನೆಗಳು ಮೋದಿ ಸರ್ಕಾರದಲ್ಲಾಗಿವೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಎಪಿಎಂಸಿ ಕಾಯ್ದೆ ತಿದ್ದುಪಡಿ ತರಲು ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆ ಅನುಷ್ಟಾನ ಮಾಡಿದರೆ ಈಗ ವಿರೋಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಹೇಳಿದ್ದಾರೆ.
ನಗರದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ರೈತ ಮೋರ್ಚಾ ಕಾರ್ಯಕಾರಣಿ ಸಭೆಯ ವೇಳೆ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣವಾಗುವ ನಿಟ್ಟಿನಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ, ಕೃಷಿ ಸಿಂಚಾಯಿ ಯೋಜನೆ, ರೈತರಿಗೆ ಇ ಮಾರ್ಕೆಟಿಂಗ್ ವ್ಯವಸ್ಥೆ ಮೊದಲಾದ ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ 22 ಕೋಟಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್, 44 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಕೃಷಿ ಸಿಂಚಾಯಿ ಯೋಜನೆ ಅನುಷ್ಟಾನ, ರೈತರು ಬೆಳೆದ 14 ಉತ್ಪನ್ನಗಳಿಗೆ ಉತ್ತಮ ಬೆಂಬಲ ಬೆಲೆಗಳನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ನೀಡಿದೆ.
ರೈತರು ಎಪಿಎಂಸಿ ಅಲ್ಲದೆ ಯಾವುದೇ ಮಾರುಕಟ್ಟೆಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಬಹುದಾಗಿದ್ದು, ಇದರಿಂದ ರೈತರಿಗೆ ಆದಾಯ ಹೆಚ್ಚಾಗುತ್ತದೆ. ಆದರೆ ರೈತರ ಸೋಗಿನಲ್ಲಿ ಕೃಷಿ ಕಾಯ್ದೆ ತಿದ್ದುಪಡಿ ವಿರೋಸುತ್ತಿರುವುದು ದುರದೃಷ್ಟಕರ. 540 ರೈತ ಸಂಘಟನೆಗಳಲ್ಲಿ ಬರೀ 42 ಸಂಘಟನೆಗಳು ಮಾತ್ರ ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದು, ಇದರಲ್ಲಿಯೂ 18 ಸಂಘಗಳು ಪ್ರತಿಭಟನೆಯಿಂದ ಹೊರಹೋಗಿವೆ. ಕೇಂದ್ರ ಕೃಷಿ ಸಚಿವರು 19 ಬಾರಿ ಸಭೆಗಳನ್ನು ನಡೆಸಿದ್ದಾರೆ ಎಂದರು.
ಹಿಂದಿನ ಯುಪಿಎ ಸರ್ಕಾರದಲ್ಲಿ ರೈತರ 65 ಸಾವಿರ ಕೋಟಿ ರೂ ಮನ್ನಾ ಮಾಡಿರುವುದನ್ನೇ ಪ್ರಸ್ತಾಪಿಸುವ ಕಾಂಗ್ರೆಸ್ಸಿಗರಿಗೆ, ಮೋದಿ ಅವರು 9 ಕೋಟಿ ರೈತರ ಖಾತೆಗೆ ಪ್ರತಿ ವರ್ಷ 6 ಸಾವಿರದಂತೆ 1.54 ಲಕ್ಷ ಕೋಟಿ ರೂ ಜಮಾ ಮಾಡಿರುವುದು ಅರ್ಥವಾಗುತ್ತಿಲ್ಲ. 80 ಕೋಟಿ ಜನರಿಗೆ ಉಚಿತ ಪಡಿತರ ನೀಡಿರುವುದು ಕಾಣುತ್ತಿಲ್ಲ. ಮೋದಿ ಅವರ ಕೃಷಿ ನೀತಿಗಳು ಹಾಗೂ ಹಗರಣ ಮುಕ್ತ ಸರ್ಕಾರದಿಂದ ಕಾಂಗ್ರೆಸ್‍ಗೆ ಟೀಕಿಸಲೂ ಏನೂ ಸಿಗುತ್ತಿಲ್ಲ ಎಂದರು.
ತೈಲ ಬೆಲೆ 2013-14ರಲ್ಲಿಯೂ ಹೆಚ್ಚಾಗಿತ್ತು. ಈಗ ಕೊವಿಡ್ ಸಂಕಷ್ಟದಲ್ಲಿ ಆರ್ಥಿಕ ಪರಿಸ್ಥಿತಿ ಏರಿಳಿತಗಳಿಂದಾಗಿ ಅನಿವಾರ್ಯವಾಗಿ ತೈಲ ಬೆಲೆಗಳು ಹೆಚ್ಚಾಗಿದ್ದು, ಮುಂದೆ ಇಳಿಕೆ ಕಾಣುತ್ತವೆ. ಆದರೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೈಕಲ್ ಏರಿ ಪೋಟೋ ತೆಗೆಸಿಕೊಂಡು ಪ್ರಚಾರದ ಗಿಮಿಕ್ ಮಾಡುತ್ತಿದ್ದಾರೆ. ಅವರಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಜನರ ಬಳಿಗೆ ಹೋಗಿ ಜನರ ಸಮಸ್ಯೆಗಳನ್ನು ಬಗೆಹರಿಸಲಿ ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಸರಬರಾಜು ಮಾಡಿದ ರೈತರಿಗೆ ಹಣ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು. ಇನ್ನು ಒಂದು ವಾರದಲ್ಲಿ ರೈತರಿಗೆ ಹಣ ಜಮಾ ಆಗಲಿದೆ ಎಂದರು.
ಸಭೆಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಎಚ್.ಎಂ.ರವಿಕುಮಾರ್,ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ್, ಬಿ.ಕುಮಾರ್, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಕೋಡಿ ನರಸಿಂಹಮೂರ್ತಿ, ಕಾರ್ಯದರ್ಶಿ ಲೋಕೇಶ್ವರಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಆರ್.ಗೋಪಿ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..