ಹಾಸನ: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಬಳಿಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿದ್ದಕ್ಕೆ ಅಸಮಾಧಾನ ಹೊರ ಹಾಕಿದ್ದ ಬಿಜೆಪಿ ಶಾಸಕ ಪ್ರೀತಂಗೌಡ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಎಸ್.ಆರ್.ಬೊಮ್ಮಾಯಿ ಸರ್ಕಾರ ಬಿದ್ದಾಗ ಪ್ರೀತಂಗೌಡ ಅವರಿಗೆ 6 ವರ್ಷ ಎಂಬ ಎಚ್.ಕೆ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯ ಬಂದಿದ್ದು 1947 ರಲ್ಲಿ ಆಗ ಹೆಚ್.ಕೆ.ಕುಮಾರಸ್ವಾಮಿ ಹುಟ್ಟಿರಲಿಲ್ಲ. ಸ್ವಾತಂತ್ರ್ಯ ದಿನಾಚರಣೆ ದಿನದಂದು ದೊಡ್ಡದಾಗಿ ಭಾಷಣ ಮಾಡುತ್ತಾರೆ. ಅವರು ಪುಸ್ತಕ ನೋಡಿ ಕಲಿತಿರುತ್ತಾರೆ, ನಾವೂ ಕೂಡ ಅಷ್ಟೇ. ಅವರಿಗೆ ಐದು ವರ್ಷ ಆದ ನಂತರವೇ 60 ವರ್ಷ ಆಗಿರೋದು, ಯಾರಿಗೂ ಹುಟ್ಟಿದ ತಕ್ಷಣ 60 ವರ್ಷ ಆಗಿರಲ್ಲ. ವಿಚಾರ ತಿಳಿಯಲು ಹಿರಿಯರ ಮಾರ್ಗದರ್ಶನ, ಪುಸ್ತಕ ಓದಿದ್ರೆ ಸಾಕು. ಕುಮಾರಸ್ವಾಮಿ ಯಾಕೆ ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.
ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಅಂದು ಹೇಳಿದ್ದೀನಿ, ಇಂದು ಹೇಳ್ತೀನಿ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿರ್ತಾರೆ, ಅವರ ಹಿಂದೆ 120 ಶಾಸಕರು ಇರುತ್ತಾರೆ. ಈ ಬಗ್ಗೆ ಯಾವುದೇ ಗೊಂದಲ, ಸಂದೇಹ ಬೇಡ. ನಾನು ಟಾಸ್ಕ್ ಮಾಸ್ಟರ್, ಟಾಸ್ಕ್ ಮಾಡೋನು. ಸಾಧನೆ ಮಾತಾಡಬೇಕು, ಮಾತಾಡೋದೆ ಸಾಧನೆ ಆಗಬಾರದು. ನಾನು ಅಸಮಾಧಾನ ಹೊರಹಾಕಿದ್ರೆ ಸಮಾಧಾನ ಮಾಡ್ಕೋಬಹುದು. ವಿಚಾರ ಈಗಾಗಲೇ ಪ್ರಸ್ತಾಪ ಮಾಡಿಯಾಗಿದೆ. ನಾನು ಒಬ್ಬ ಸಾಮಾನ್ಯ ಶಾಸಕ ಬೇರೆಯವರನ್ನು ಮಂತ್ರಿ ಮಾಡಿ, ಪಕ್ಷದಲ್ಲಿ ಚಟುವಟಿಕೆ ಮಾಡಿ ಅಂತ ಹೇಳುವಷ್ಟು ದೊಡ್ಡವನ್ನಲ್ಲ. ರಾಷ್ಟ್ರೀಯ ನಾಯಕರು ಎಲ್ಲದರ ಬಗ್ಗೆ ಗಮನ ಹರಿಸುತ್ತಾರೆ. ಸೂಕ್ತ ಸಮಯದಲ್ಲಿ, ಸೂಕ್ತ ಸಂದರ್ಭದಲ್ಲಿ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಇಂದು ಸಂಜೆ ಬೆಂಗಳೂರಿಗೆ ಹೋಗುತ್ತಿದ್ದೇನೆ, ಸಿಎಂ ಅವರನ್ನು ಭೇಟಿ ಮಾಡುತ್ತೇನೆ. ಸಿಎಂ ಭೇಟಿ ಜೊತೆಗೆ ಗೋವಿಂದಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಅಭಿವೃದ್ಧಿ ವಿಚಾರ, ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ, ಕಾರ್ಯಕರ್ತರ ಅಸಮಾಧಾನದ ಬಗ್ಗೆಯೂ ಮಾತನಾಡುತ್ತೇನೆ. ಅಭಿವೃದ್ಧಿ ಸಲುವಾಗಿ ಅವರ ಸಲಹೆ ಸ್ವೀಕರಿಸುತ್ತೇನೆ ಎಂದರು. ದೇವೇಗೌಡರ ಮನೆಗೆ ಸಿಎಂ ಹೋಗಿ ಆಶೀರ್ವಾದ ಪಡೆದಿದ್ದರ ಬಗ್ಗೆ ಶಾಸಕ ಪ್ರೀತಂಗೌಡ ಅಸಮಾಧಾನ ಹೊರಹಾಕಿದ್ದಕ್ಕೆ ಸಿಎಂ ಪ್ರತಿಕ್ರಿಯೆಯ ಬೆನ್ನಲ್ಲೇ ಶಾಸಕರು ಭೇಟಿಗೆ ಮುಂದಾಗಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನಮಾನ ತಿರಸ್ಕಾರ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪನವರು 4 ಸಲ ಮುಖ್ಯಮಂತ್ರಿ ಆಗಿದ್ದವರು. ದೇಶದಲ್ಲಿ, ರಾಜ್ಯದಲ್ಲಿ ಹಿರಿಯ ರಾಜಕಾರಣಿ, ಅಂತವರ ಬಗ್ಗೆ ನಾನೇನು ಹೇಳುವುದು. ಅವರಿಗೆ ಗೌರವ ಕೊಟ್ಟಿದ್ದಾರೆ ಯಡಿಯ್ಯೂರಪ್ಪನವರು ಅದನ್ನು ಸ್ವೀಕರಿಸಿದ್ದಾರೆ. ನನ್ನ ಕನಸಿನಲ್ಲಿ ಕೂಡ ಯಡಿಯೂರಪ್ಪ ನಾಯಕರಾಗಿ ಬರುತ್ತಾರೆ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..