ದೊಡ್ಡಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ ನಗರಸಭೆ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಪುರುಷರು 25554, ಮಹಿಳೆಯರುವ 25505 ಒಟ್ಟು 50559 ಸೇರಿ ಶೇ.75.09 ಮತದಾನವಾಗಿದೆ.
ಮತದಾನ ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ಮಾತಿನಚಕಮಕಿ ಹೊರತುಪಡಿಸಿ, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
31 ವಾರ್ಡ್ ಗಳಗೆ 63 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಮತದಾನ ಯಾವುದೇ ಅಡೆತಡೆಗಳಿಲ್ಲದೆ ಪ್ರಾರಂಭವಾಯಿತು. ಆರಂಭದಲ್ಲಿ ನೀರಸವಾಗಿದ್ದ ಮತದಾನ ಮಧ್ಯಾಹ್ನದ ನಂತರ ಚುರುಕುಗೊಂಡಿತ್ತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.35 ಮತದಾನವಾಗಿತ್ತು. ತುಂತುರು ಮಳೆಯಿಂದಾಗಿ ಕೆಲಕಾಲ ಮತದಾನಕ್ಕೆ ಅಡ್ಡಿಯಾಗಿತ್ತು. ಸಂಜೆ 5ರ ವೇಳೆಗೆ ಶೇ. 68 ಮತದಾನವಾಗಿತ್ತು.
ಕೊವಿಡ್-19 ಹಿನ್ನಲೆಯಲ್ಲಿ ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ, ಮತದಾರರಿಗೆ ಸ್ವಾನಿಟೈಸರ್ ಹಾಕಿ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳ ಬಿಡಲಾಗುತ್ತಿತ್ತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕೆಲವಡೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರಿಂದ, ಮತದಾರರು ಗೊಂದಲಕ್ಕೊಳಗಾಗಿ ಮತ ಚಲಾಯಿಸಲು ಅಡ್ಡಿಯಾಗಿತ್ತು.
ಒಂದೇ ಕುಟುಂಬದ ಹೆಸರುಗಳು ಎರಡು ಮೂರು ವಾರ್ಡ್ ಗಳಿಗೆ ಹಂಚಿ ಹೋಗಿ, ಯಾವ ಮತಗಳು ಎಲ್ಲಿವೆ ಎನ್ನುವುದು ತಿಳಿಯುವುದೇ ಕಷ್ಟವಾಗಿ, ಮತದಾರರು ವ್ಯವಸ್ಥೆಯನ್ನು ಶಪಿಸುವಂತಾಯಿತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಚುನಾವಣಾ ಆಯೋಗವೇ ವಿತರಿಸಿತ್ತು. ಆದರೆ ಈ ಬಾರಿ ಮತದಾರರಿಗೆ ಯಾವುದೇ ಗುರುತಿನ ಚೀಟಿ ಹಾಗೂ ಮತಗಟ್ಟೆಗಳ ವಿವರಗಳನ್ನೊಳಗೊಂಡ ಚೀಟಿಗಳನ್ನು ವಿತರಿಸದೇ ಇದ್ದುದರಿಂದ, ಅನಿವಾರ್ಯವಾಗಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ಮೊರೆ ಹೋಗಬೇಕಾದ ಪ್ರಸಂಗ ಎದುರಾಗಿತ್ತು. ಮತದಾರರ ಪಟ್ಟಿಯಲ್ಲಿನ ಕ್ರಮ ಸಂಖ್ಯೆ ಗೊತ್ತಿಲ್ಲದೇ ಗುರುತಿನ ಚೀಟಿ ಹಿಡಿದು ಮತಗಟ್ಟೆಗೆ ಆಗಮಿಸಿ, ಗೊಂದಲಕ್ಕೀಡಾದ ಪ್ರಸಂಗಗಳು ನಡೆದವು.
ಮತದಾರರಿಗೆ ಆಯೋಗದ ಗುರುತಿನ ಚೀಟಿ ಹಾಗೂ ಇತರೆ ಗುರುತಿನ ಚೀಟಿ ಕಡ್ಡಾಯಗೊಳಿಸಿದ್ದರಿಂದ ನಕಲಿ ಮತದಾನ ನಡೆಯಲು ಆಸ್ಪದವಿಲ್ಲದಂತಾಗಿತ್ತು.
ಮತದಾನ ಕೇಂದ್ರದ 100 ಮೀ.ಒಳಗೆ ಪ್ರಚಾರ ಮಾಡಬಾರದು ಎನ್ನುವ ನಿಯಮವಿದ್ದರೂ ಬಹಳಷ್ಟು ಮತಗಟ್ಟೆಗಳಲ್ಲಿ ಅಭ್ಯರ್ಥಿಗಳು ಮತಗಟ್ಟೆಗಳ ಬಳಿ ಬಂದು ಮತದಾರರ ಬಳಿ ಮತ ಕೇಳುತ್ತಿದ್ದುದು ಸಾಮಾನ್ಯವಾಗಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..