ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಹೋಬಳಿಯಲ್ಲಿ ಚಿರತೆ ಹಾವಳಿ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಸೆ.6ರಂದು ಆರೂಢಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಪಚ್ಚಾರಲಹಳ್ಳಿ ಗ್ರಾಮದ ಹೊರವಲಯದ ತೋಟದ ಮನೆಗೆ ನುಗ್ಗಿ ಸೀಮೆ ಹಸು ಕೊಂದು ಹಾಕಿದ್ದ ಪ್ರಕರಣ ಮಾಸುವ ಮುನ್ನವೇ, ಇದೇ ಗ್ರಾಮಪಂಚಾಯಿತಿ ವ್ಯಾಪ್ತಿಯ ವಡ್ಡನಹಳ್ಳಿ ಗ್ರಾಮಕ್ಕೆ ನುಗ್ಗಿ ಎಮ್ಮೆ ಕರುವನ್ನು ಭಕ್ಷಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ವಡ್ಡನಹಳ್ಳಿ ಗ್ರಾಮದ ಅಡವೀಶಪ್ಪ ಎನ್ನುವವರ ಮನೆಯ ಮುಂಭಾಗದಲ್ಲಿ ಕಟ್ಟಲಾಗಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿದ್ದು, ಗ್ರಾಮದಿಂದ ಬಹುದೂರ ಎಳೆದೊಯ್ದು ಭಕ್ಷಿಸಿ ಪರಾರಿಯಾಗಿದೆ.
ಘಟನೆಯಿಂದ ರೈತ ಅಡವೀಶಪ್ಪನವರಿಗೆ ಸಾವಿರಾರುವನಷ್ಟ ಉಂಟಾಗಿದ್ದರೆ. ಗ್ರಾಮದ ನಡು ಭಾಗಕ್ಕೆ ಬಂದು ಚಿರತೆ ದಾಳಿ ನಡೆಸಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಚಿರತೆ ಹಾವಳಿ ತಡೆಗಟ್ಟಿ: ಸಾಸಲು ಹೋಬಳಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಮಿತಿಮೀರಿದೆ. ಇದರಿಂದ ರೈತರು ನಷ್ಟಕ್ಕೆ ಒಳಗಾದರೆ, ಜಮೀನುಗಳಿಗೆ ಕೆಲಸಕ್ಕೆ ತೆರಳಲು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿದೆ. ಅರಣ್ಯ ಇಲಾಖೆಯವರು ಕೂಡಲೇ ಚಿರತೆ ಬಂಧನಕ್ಕೆ ಕ್ರಮಕೈಗೊಳ್ಳುವುದರ ಜೊತೆಗೆ ನಷ್ಟಕ್ಕೆ ಒಳಗಾಗುವ ರೈತರಿಗೆ ಪರಿಹಾರ ನೀಡುವಂತೆ ಆರೂಢಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಜಯಮ್ಮಪ್ರಭು ಒತ್ತಾಯಿಸಿದ್ದಾರೆ.
ಮೂರು ಕಡೆ ಬೋನ್ ಅಳವಡಿಕೆ: ಚಿರತೆ ಹಾವಳಿ ತಡೆ ಗಟ್ಟಲು, ತಾಲೂಕಿನ ತೂಬಗೆರೆ, ಪಚ್ಚಾರಲಹಳ್ಳಿ ಹಾಗೂ ಸಾಸಲು ಬಳಿ ಅರಣ್ಯ ಇಲಾಖೆ ಬೋನ್ ಅಳವಡಿಸಿದೆ. ಆದರೂ ಚಿರತೆ ತಪ್ಪಿಸಿಕೊಂಡು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವುದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತಲೆ ಬಿಸಿ ಉಂಟುಮಾಡಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..