ದೊಡ್ಡಬಳ್ಳಾಪುರ: ತಾಲೂಕಿನಲ್ಲಿ 15 ರಿಂದ 18 ವರ್ಷದೊಳಗಿನ 12675 ಮಕ್ಕಳಿದ್ದಾರೆ. ಈ ಮಕ್ಕಳಿಗೆ ಸರ್ಕಾರದ ನಿರ್ದೇಶನದಂತೆ ಕೋವಿಡ್-19ರ ಲಸಿಕೆಯನ್ನು ನೀಡಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸಕಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ಜನವರಿ 03 ರಿಂದ ಮಕ್ಕಳು ಓದುತ್ತಿರುವ ಶಾಲಾ ಕಾಲೇಜುಗಳಲ್ಲಿಯೇ ಲಸಿಕಾ ಕಾರ್ಯಗಳನ್ನು ಆಯೋಜಿಸಲಾಗುವುದು ಎಂದು ತಹಶೀಲ್ದಾರ್ ಮೋಹನಕುಮಾರಿ ಅವರು ತಿಳಿಸಿದ್ದಾರೆ.
ಅವರು ಈ ಕುರಿತು ಹರಿತಲೇಖನಿಗೆ ಮಾಹಿತಿಯನ್ನು ನೀಡಿ, ಕೇಂದ್ರ ಸರ್ಕಾರವು ಕೋವಿಡ್-19 ಸಾಂಕ್ರಾಮಿಕವನ್ನು ದೇಶದಿಂದ ನಿರ್ಮೂಲನೆಗೊಳಿಸುವ ಪಣವನ್ನು ತೊಟ್ಟಿದ್ದು, ಈ ನಿಟ್ಟಿನಲ್ಲಿ ಜನವರಿ 3ರಿಂದ 15 ರಿಂದ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕೋವಿಡ್-19 ಲಸಿಕೆಯನ್ನು ನೀಡುವುದಾಗಿ ಘೋಷಣೆ ಮಾಡಿರುತ್ತದೆ. ಈ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಆಡಳಿತದ ವತಿಯಿಂದ ತಾಲೂಕಿನ 15 ರಿಂದ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕೋವಿಡ್-19 ಲಸಿಕೆಯನ್ನು ನೀಡಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ನಾಳೆ 74 ಶಾಲಾ ಕಾಲೇಜುಗಳಲ್ಲಿ ಲಸಿಕೆ ಹಾಕಲಾಗುವುದು ಈ ಕಾರ್ಯಕ್ರಮ ಪ್ರಯುಕ್ತ ಸಾಂಕೇತಿಕವಾಗಿ ನಗರದ ಜೂನಿಯರ್ ಕಾಲೇಜಿನಲ್ಲಿ ನಾಳೆ 10.30ಕ್ಕೆ ಶಾಸಕ ಟಿ.ವೆಂಕಟರಮಣಯ್ಯ ಅವರು ಚಾಲನೆ ನೀಡಲಿದ್ದಾರೆ.
ಪೋಷಕರು ಮಕ್ಕಳ ಮನವೊಲಿಸಲು ಮನವಿ: ಮಕ್ಕಳು ತಾವು ಓದುತ್ತಿರುವ ಶಾಲಾ ಕಾಲೇಜುಗಳಲ್ಲಿಯೇ ಲಸಿಕಾ ಸತ್ರಗಳನ್ನು ಆಯೋಜಿಸಲಾಗುವುದು. ಲಸಿಕೆ ಪಡೆಯುವ ಮಕ್ಕಳು ತಮ್ಮ ಆಧಾರ್ ಕಾರ್ಡ್ ನ್ನು ತೋರಿಸಿ ಲಸಿಕೆಯನ್ನು ಪಡೆಯಬಹುದಾಗಿರುತ್ತದೆ. ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ ತಮ್ಮ ಶಾಲಾ ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಲಸಿಕೆಯನ್ನು ಪಡೆಯಬಹುದಾಗಿರುತ್ತದೆ. ಈ ಲಸಿಕಾಕರಣದಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವವಾಗಿದ್ದು, ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಲಸಿಕೆಯ ಕುರಿತು ಅರಿವು ಮೂಡಿಸಿ ಪ್ರತಿಯೊಂದು ಮಗುವು ಲಸಿಕೆಯನ್ನು ಪಡೆಯಲು ಪ್ರೇರೇಪಿಸಬೇಕು. ಪೋಷಕರು ಮಕ್ಕಳಲ್ಲಿ ಲಸಿಕೆ ಪಡೆಯಲು ಮನವೊಲಿಸಿ ಅಧಾರ್ ಪ್ರತಿಯನ್ನು ಮಕ್ಕಳೊಂದಿಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.
ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯತೆ ಸಾಧಿಸಿಕೊಂಡು ಸರ್ಕಾರ ನೀಡಿರುವ ಲಸಿಕಾಕರಣ ಗುರಿಯನ್ನು ತ್ವರಿತಗತಿಯಲ್ಲಿ ಮಾಡಲು ಸಿದ್ದತೆ ನಡೆಸಲಾಗಿದೆ ಎಂದು ತಹಶೀಲ್ದಾರ್ ಮೋಹನಕುಮಾರಿ ಅವರು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….