ದೊಡ್ಡಬಳ್ಳಾಪುರ, (ಜುಲೈ.03): ತಾಲೂಕಿನ ವಿವಿಧೆಡೆ ಗುರುಪೌರ್ಣಿಮಾ ಆಚರಣೆ ಶ್ರದ್ಧಾಭಕ್ತಿಗಳಿಂದ ನಡೆಯಿತು. ಮಹರ್ಷಿ ವೇದವ್ಯಾಸರ ಸ್ಮರಣೆ ಅಂಗವಾಗಿ ನಡೆಯುವ ಈ ದಿನದಂದು ಗುರುಸ್ಮರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ರಂಗಪ್ಪ ಸರ್ಕಲ್ ಬಳಿಯಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೌರ್ಣಿಮಾ ಅಂಗವಾಗಿ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ನೂರಾರು ಭಕ್ತಾದಿಗಳು ಬೆಳಗಿನಿಂದಲೇ ಸಾಲುಗಟ್ಟಿ ನಿಂತು ಸಾಯಿಬಾಬಾ ದರ್ಶನ ಪಡೆದರು.
ಬೆಳಗಿನ ಜಾವ ಕಾಕಡ ಆರತಿಯಿಂದ ಆರಂಭವಾಗಿ ಮೂರ್ತಿಗೆ ಸುಗಂಧ ದ್ರವ್ಯಾಭಿಷೇಕ, ದೇವಾಲಯದಲ್ಲಿ ಗಣಪತಿ ಹೋಮ, ಗುರು ದತ್ತಾತ್ರೇಯ ಹಾಗೂ ಸಾಯಿ ಹೋಮ, ಸತ್ಯನಾರಾಯಣ ಸ್ವಾಮಿ ಪೂಜೆ, ಹಾಗೂ ಧೂಪಾರತಿ ನಡೆದವು.
ಸಂಜೆ ಮಹಿಳಾ ಮಂಡಲಿಗಳಿಂದ ಸಾಮೂಹಿಕ ವಿಷ್ಣು ಪಾರಾಯಣ ನಡೆಯಿತು.
ನಗರದ ರೇಲ್ವೆ ನಿಲ್ದಾಣದ ಸಮೀಪ ಬೆಸೆಂಟ್ ಪಾರ್ಕ್ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಗುರುಪೌರ್ಣಿಮಾ ಮಹೋತ್ಸವ ಶ್ರದ್ಧಾಭಕ್ತಿ ಸಂಭ್ರಮದಿಂದ ನಡೆಯಿತು. ಬೆಳಗಿನ ಜಾವ ಕಾಕಡ ಆರತಿಯಿಂದ ಆರಂಭವಾಗಿ ನಂತರ ನಡೆದ ಪನ್ನೀರು ಅಭಿಷೇಕದಲ್ಲಿ ಭಕ್ತಾದಿಗಳು ಪನ್ನೀರು ಅಭಿಷೇಕ ನೆರವೇರಿಸಿದರು.
ಕ್ಷೀರಾಭಿಷೇಕ ವಿಶೇಷ ಪೂಜೆ ಹಾಗೂ ಭಜನೆ,ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು. ದೇವಾಲಯದ ಧರ್ಮದರ್ಶಿ ವೇಣುಗೋಪಾಲ್ ನೇತೃತ್ವ ವಹಿಸಿದ್ದರು.
ನಗರದ ದೇವರಾಜನಗರದಲ್ಲಿರುವ ಭಗವಾನ್ ಶ್ರೀ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಸಾಯಿ ಸತ್ಯನಾರಾಯಣ ಪೂಜೆ, ಅಭಿಷೇಕ ಭಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….